ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತನ್ನ ನೈತಿಕ ಹಾಗೂ ಕಾನೂನುಬದ್ಧ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಅಮೆರಿಕದ ಸಂಸದ ಬ್ರಾಡ್ ಶೆರ್ಮನ್ ಅವರು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಜೈಶ್-ಎ-ಮೊಹಮ್ಮದ್ ಸಂಘಟನೆಯಂತಹ ಉಗ್ರಗಾಮಿ ಗುಂಪುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ನಿಯೋಗವನ್ನು ಭೇಟಿಯಾದ ಶೆರ್ಮನ್, ಜೈಶ್ ಸಂಘಟನೆಯ ಭಯಾನಕ ಕೃತ್ಯಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣೆ ಮತ್ತು ಹತ್ಯೆ ಪ್ರಕರಣವನ್ನು ಉದಾಹರಣೆಯಾಗಿ ತಿಳಿಸಿದ್ದಾರೆ. ಈ ದಾರುಣ ಘಟನೆಯಲ್ಲಿ ಭಾಗವಹಿಸಿದ್ದ ಉಗ್ರ ಒಮರ್ ಸಯೀದ್ ಶೇಖ್ ಶಿಕ್ಷೆಗೊಳಗಾಗಿದ್ದಾನೆ ಎಂದು ಅವರು ಹೇಳಿದರು.
ವಾಷಿಂಗ್ಟನ್‌ನಲ್ಲಿರುವ ಭಾರತದ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗವು ಪಾಕಿಸ್ತಾನ ಪ್ರಾಯೋಜಿತ ಉಗ್ರ ಚಟುವಟಿಕೆಗಳು ಹಾಗೂ ಇತ್ತೀಚಿನ ಆಪರೇಷನ್ ಸಿಂಧೂರ್ ಮಾಹಿತಿಗಳನ್ನು ಅಮೆರಿಕದ ಮಾಧ್ಯಮ ಹಾಗೂ ರಾಜಕಾರಣಿಗಳಿಗೆ ನೀಡುತ್ತಿದೆ. ಶೆರ್ಮನ್ ಈ ಸಂದರ್ಭದಲ್ಲಿ ಭಾರತದ ಭಯೋತ್ಪಾದನೆ ವಿರೋಧಿ ನಿಲುವಿಗೆ ಸಂಪೂರ್ಣ ಬೆಂಬಲ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಜೈಶ್-ಎ-ಮೊಹಮ್ಮದ್ ಅನ್ನು ವಿಶ್ವಸಂಸ್ಥೆ ನಿಷೇಧಿತ ಉಗ್ರ ಸಂಘಟನೆಯಾಗಿ ಗುರುತಿಸಿದೆ. 2019ರ ಪುಲ್ವಾಮಾ ದಾಳಿಯಂತಹ ಅನೇಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ ಎಂದು ಭದ್ರತಾ ಸಂಸ್ಥೆಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಡ ಹೆಚ್ಚುತ್ತಿದೆ.
ಈ ನಡುವೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಬ್ರಾಡ್ ಶೆರ್ಮನ್, ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವದನ್ನು ನಾನು ಪಾಕಿಸ್ತಾನಿ ನಿಯೋಗಕ್ಕೆ ತಿಳಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚಿಸಿದ್ದೇನೆ.














