ಮನೆ ರಾಜಕೀಯ ರಾಜ್ಯದಲ್ಲಿರುವುದು ತಾಲಿಬಾನ್‌ ಸರ್ಕಾರ, ಹಿಂದೂಗಳಿಗೆ ಮಾನಸಿಕ ಹಿಂಸೆ ಕೊಡುವ ಪೊಲೀಸರು: ಆರ್.ಅಶೋಕ

ರಾಜ್ಯದಲ್ಲಿರುವುದು ತಾಲಿಬಾನ್‌ ಸರ್ಕಾರ, ಹಿಂದೂಗಳಿಗೆ ಮಾನಸಿಕ ಹಿಂಸೆ ಕೊಡುವ ಪೊಲೀಸರು: ಆರ್.ಅಶೋಕ

0

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ತಾಲಿಬಾನ್‌ ಸರ್ಕಾರವಾಗಿ ಬದಲಾಗಿದ್ದು, ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಿ ಬುದ್ಧಿ ಕಲಿಸಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ‌ ಹಿಡಿದಿದೆ. ಇದಕ್ಕಾಗಿಯೇ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್‌ ಸರ್ಕಾರ, ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದೆ. ಪಾಕಿಸ್ತಾನದ ಕುನ್ನಿಗಳು ಎಂದು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆ ಇಲ್ಲ.‌ ಬಿಜೆಪಿ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಎಂದಿದ್ದರು. ಆದರೂ ಮುಸ್ಲಿಮರನ್ನು ರಕ್ಷಣೆ ಮಾಡಿ ಹಿಂದೂಗಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಜನರು ಬುದ್ಧಿ ಕಲಿಸಿದ್ದಾರೆ. ಅದೇ ರೀತಿ ಮತ್ತೆ ಬುದ್ಧಿ ಕಲಿಸಲು ಬಿಜೆಪಿಯಿಂದ ದೊಡ್ಡ ಹೋರಾಟ ಮಾಡಲಾಗುವುದು. ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲಾಗುತ್ತಿದೆ ಎಂದು ದೂರಿದರು.

ಸಮರ್ಪಕ ತನಿಖೆ ನಡೆಯಲಿ

ಚಿತ್ರನಟ ದರ್ಶನ್‌ ಪೊಲೀಸರಿಗೆ ದೂರು ನೀಡಿ ರೇಣುಕಾಸ್ವಾಮಿಗೆ ತಿಳಿ ಹೇಳಿಸಬಹುದಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಂದಿದ್ದರೆ ಅದು ದೊಡ್ಡ ತಪ್ಪು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.

ರಾಜ್ಯದಲ್ಲಿ ಅಪರಾಧಿ ಚಟುವಟಿಕೆ ಹೆಚ್ಚಿದೆ. ಚನ್ನಗಿರಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಲಾಗಿದೆ. ಪೊಲೀಸರಿಗೆ ಕಪಾಳ ಮೋಕ್ಷವಾಗಿದೆ. ಕಾನೂನು ಪೊಲೀಸರ ಹಿಡಿತದಲ್ಲೇ ಇಲ್ಲ. ಆದ್ದರಿಂದ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿ ಮುಚ್ಚುಮರೆ ಮಾಡುತ್ತಿದ್ದಾರೆ. ನಾವು ಕರ್ನಾಟಕದಲ್ಲಿದ್ದೇವೆಯೇ ಹೊರತು ಜಮ್ಮು ಕಾಶ್ಮೀರದಲ್ಲಿಲ್ಲ. ಇದನ್ನು ಟಿವಿ ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಕ್ರಮ ವಹಿಸುವುದು ಸರಿಯಲ್ಲ ಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇಂತಹ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದರು.

ಬರ ಪರಿಹಾರ ನೀಡಿಲ್ಲ

ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರ ಅಜ್ಞಾನ ಪ್ರದರ್ಶನ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಇನ್ನೂ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಆರ್‌.ಅಶೋಕ ದೂರಿದರು.

ರೈತರಿಗೆ ತಲುಪಬೇಕಾದ ಪರಿಹಾರದ ಹಣ ಇನ್ನೂ ತಲುಪಿಲ್ಲ ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಪತ್ರ ಬರೆದು ರಾಜ್ಯ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ನೀಡಿದೆ. ಅದನ್ನು ರೈತರಿಗೆ ವಿತರಣೆ ಮಾಡಿ ಎಂದರೂ ಸಿಎಂ ಸಿದ್ದರಾಮಯ್ಯನವರ ಕೈಯಲ್ಲಿ ಆಗುತ್ತಿಲ್ಲ. ಬರ ಪರಿಹಾರ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಡಲಿ, ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದು ಬೇಡ ಎಂದು ಆರ್‌.ಅಶೋಕ ಆಗ್ರಹಿಸಿದ್ದಾರೆ.

ನನಗೆ ನಿಯಮ ಪ್ರಕಾರ ಸರ್ಕಾರಿ ನಿವಾಸ ನೀಡಲು ಸರ್ಕಾರ ಬಹಳ ತಡ ಮಾಡುತ್ತಿದೆ. ನಾನು ಡಿ.ಕೆ.ಶಿವಕುಮಾರ್‌ ಅವರ ಮನೆ ಕೇಳುತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್‌ ಜೊತೆಗೆ ಮಾದರಿಯಾಗಿ ನಡೆದುಕೊಂಡಿತ್ತು. ಅದೇ ರೀತಿ ಈಗಲೂ ಸರ್ಕಾರ ನಡೆದುಕೊಳ್ಳಬೇಕು. ಈ ಬಗ್ಗೆ ಮೂರು ಪತ್ರ ಬರೆದರೂ ಸ್ಪಂದಿಸಿಲ್ಲ. ನಿವಾಸ ಕೊಡದಿದ್ದರೂ ಜನಸೇವೆ ಮಾಡುವ ಶಕ್ತಿ ಇದೆ ಎಂದರು.

ಹಿಂದಿನ ಲೇಖನದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್‌ ಬಂಧನ
ಮುಂದಿನ ಲೇಖನಹಾಸ್ಯ