ಮೈಸೂರು(Mysuru): ಟಿ ನರಸೀಪುರ ತಾಲ್ಲೂಕಿನಲ್ಲಿ ಇರುವ ಚಿರತೆ ಹಾವಳಿ ತಡೆಗೆ ಚಿರತೆಗಳ ಸೆರೆಗೆ ಚಿರತೆ ಟಾಸ್ಕ್ ಫೋರ್ಸ್ ತಂಡಗಳ ರಚನೆ ಮಾಡಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಮರಗಳಲ್ಲಿ ಕೊಂಬೆಗಳು ಬೆಳೆದಿದ್ದು ಅವುಗಳ ಕಟಾವು ಆಗಬೇಕು. ಬೀದಿ ದೀಪಗಳು ರಾತ್ರಿ ವೇಳೆ ಕಡ್ಡಾಯವಾಗಿ ಆನ್ ಆಗಿರಬೇಕು. ಸದರಿ ಹಳ್ಳಿಗಳಿಗೆ ಕಡ್ಡಾಯವಾಗಿ ಬೆಳಿಗ್ಗೆ, ಮಧ್ಯಾಹ್ನ , ಸಂಜೆ ಹೆಚ್ಚಿನ ಬಸ್ ವ್ಯವಸ್ಥೆಯನ್ನೂ ಮಾಡಬೇಕು ಎಂದರು.
ಚಿರತೆ ಸೆರೆಗೆ ಕ್ರಮ ಕೈಗೊಂಡು ಜನರಲ್ಲಿ ಭರವಸೆ ಮೂಡಿಸಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಟಿ ನರಸಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶ್ವಿನ್ ಕುಮಾರ್ ಅವರು ಮಾತನಾಡಿ ಚಿರತೆ ದಾಳಿಯಿಂದ ಜನರು ಭಯ ಬಿತರಾಗಿದ್ದರೆ. ಬೇಗ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಿ. ತಾಲ್ಲೂಕಿನಲ್ಲಿ ಹೆಚ್ಚಿನ ಚಿರತೆ ಹಾಗೂ ಮರಿಗಳು ಬೀಡು ಬಿಟ್ಟಿವೆ. ಸ್ಪೆಷಲ್ ಶೂಟರ್ ಗಳನ್ನ ಬಳಸಿಕೊಂಡು ಚಿರತೆ ಹಾವಳಿ ತಪ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ಕೆ. ವಿ ರಾಜೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ 4 ಜನರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಚಿರತೆ ಟಾಸ್ಕ್’ ಫೋರ್ಸ್ ರಚನೆ ಮಾಡಲು ಮಾನ್ಯ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಕೃಷಿ ಉದ್ದೇಶಕ್ಕೆ ಎಂದು ಜಾಗವನ್ನು ಖರೀದಿಸಿ ಬಹಳ ವರ್ಷಗಳಿಂದ ಬೀಳು ಬಿಟ್ಟಿದ್ದಾರೆ. ಮೂರು ವರ್ಷ ಗಳಿಗಿಂತ ಹೆಚ್ಚು ಬೀಳು ಬಿಟ್ಟಿದ್ದರೆ ಅಂಥವರಿಗೆ ನೊಟೀಸ್ ನೀಡಲಾಗುವುದು. ಚಿಕನ್ ಸ್ಟಾಲ್ ಗಳಿಂದ ವೆಸ್ಟ್ ಗಳನ್ನು ಹಳ್ಳಿಗಳಲ್ಲಿ ಹಾಕದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಮಾಹಿತಿ ನೀಡಿ, ಜನವರಿ ತಿಂಗಳಿನಲ್ಲಿ 3 ಚಿರತೆಗಳು ಹಾಗೂ 5 ಚಿರತೆ ಮರಿಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ಸೆರೆಗೆ ಬೋನು ಗಳನ್ನು ಇಡಲಾಗಿದೆ .ಚಿರತೆ ಸೆರೆಗೆ 158 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿವಿಧ ತಂಡಗಳಲ್ಲಿ ನಿಯೋಜಿಸಲಾಗಿದೆ. ರಾತ್ರಿ ವೇಳೆ ತಂಡಗಳು ಗಸ್ತು ತಿರುಗುತ್ತಿದ್ದಾರೆ. ಕಬ್ಬು ಕಟಾವಣೆ ವೇಗ ಗತಿಯಲ್ಲಿ ನಡಿಯುತ್ತಿದೆ. ಇನ್ನೂ 800 ಎಕರೆ ಕಬ್ಬು ಕಟಾವು ಆಗಬೇಕಿದೆ. ಡ್ರೋನ್ ಬಳಕೆಯನ್ನು ಸಹ ಮಾಡಲಾಗಿದೆ. ಏಪ್ರಿಲ್ 2022 ರಿಂದ ಇಲ್ಲಿಯವರೆಗೆ 73 ಚಿರತೆಗಳನ್ನು ಮೈಸೂರು ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಪೂರ್ಣಿಮಾ, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.