ಮನೆ ಸುದ್ದಿ ಜಾಲ ರಸ್ತೆ ಅಪಘಾತಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು: ಡಾ. ಕೆ ವಿ ರಾಜೇಂದ್ರ

ರಸ್ತೆ ಅಪಘಾತಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು: ಡಾ. ಕೆ ವಿ ರಾಜೇಂದ್ರ

0

ಮೈಸೂರು(Mysuru): ರಸ್ತೆ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಆದ್ದರಿಂದ ಜನರಲ್ಲಿ ರಸ್ತೆ ಅಪಘಾತಗಳ ಬಗ್ಗೆ ಮಾಹಿತಿಯನ್ನು ಮತ್ತು ಜಾಗೃತಿಯನ್ನು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ತಿಳಿಸಿದರು.

 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ತಿಂಗಳಲ್ಲಿ 9 ಮಾರಣಾಂತಿಕ ಅಪಘಾತಗಳು ನಡೆದಿದ್ದು ಇವುಗಳಿಗೆ ಸೂಕ್ತವಾದ ಕಾರಣವನ್ನು ಮತ್ತು ಪರಿಹಾರ ಕ್ರಮಗಳ ಬಗ್ಗೆ ಸಮಿತಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಉತ್ತಮವಾಗಿಲ್ಲದ ರಸ್ತೆಗಳು, ಕುಡಿದು ಗಾಡಿ ಓಡಿಸುವುದು, ಸೀಟ್ ಬೆಲ್ಟ್ ಹಾಕದಿರುವುದು, ಸ್ಪೀಡ್ ಡ್ರೈವಿಂಗ್, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ಗುಣಮಟ್ಟದ ಹೆಲ್ಮೆಟ್ ಧರಿಸದೆ ಇರುವುದು ಮತ್ತು ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿವೆ. ಆದ್ದರಿಂದ ಸಂಭವಿಸಿರುವ ಅಪಘಾತಗಳಲ್ಲಿ ಯಾವ ಕಾರಣದಿಂದ ಹೆಚ್ಚು ಅಪಘಾತಗಳಾಗುತ್ತಿವೆ ಎಂಬುದರ ಬಗ್ಗೆ ಸೂಕ್ತ ವರದಿಯನ್ನು ಮತ್ತು ಅವುಗಳನ್ನು ತಡೆಗಟ್ಟಲು ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಕುರಿತು 15 ದಿನಕ್ಕೊಮ್ಮೆ ಜೂಮ್ ಮೀಟಿಂಗ್ ಮಾಡಬೇಕು. ಪ್ರತಿ ತಿಂಗಳು ನಡೆಯುವ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ, ಸಭೆಗೆ ಹಾಜರಾಗದ ಇತರ ಇಲಾಖೆಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಜು ರವರಿಗೆ ಆದೇಶಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಾದ ಬಿ ಟಿ ಶ್ರೀಧರ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಮ್.ಎಸ್ ರಾಜೇಂದ್ರ ಕುಮಾರ್, ಹುಣಸೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ: ದೇವರಾಜ್ ಭೂತೆ
ಮುಂದಿನ ಲೇಖನಚಿರತೆ ಸೆರೆಗೆ ಚಿರತೆ ಟಾಸ್ಕ್ ಫೋರ್ಸ್ ತಂಡಗಳ ರಚನೆ: ಎಸ್. ಟಿ. ಸೋಮಶೇಖರ್