ಮನೆ ರಾಜ್ಯ ಶಿಕ್ಷಕರು, ಪದವೀಧರು ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ

ಶಿಕ್ಷಕರು, ಪದವೀಧರು ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ

0

ಬೆಂಗಳೂರು (Bengaluru): ದಕ್ಷಿಣ ಪದವೀಧರ ಕ್ಷೇತ್ರದಿಂದ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಜೆಡಿಎಸ್‌, ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದರು ಆದರೆ ಯಾವತ್ತೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಪದವೀಧರ ಕ್ಷೇತ್ರದಿಂದ ಗೆದ್ದಿದ್ದು. ಜೆಡಿಎಸ್‌ ನವರು ಮತ್ತು ಬಿಜೆಪಿ ಅವರು ಇದನ್ನು ನಮ್ಮ ಭದ್ರಕೋಟೆ ಎಂದು ಹೇಳುತ್ತಿದ್ದರು. ಇಂಥಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಅಭ್ಯರ್ಥಿ ಮಧು ಮಾದೇಗೌಡ ಅವರು ಗೆದ್ದಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ನಮ್ಮ ಅಭ್ಯರ್ಥಿಗೆ ಮತ ನೀಡಿದ ಪದವೀಧರ ಮತದಾರರಿಗೆ ಧನ್ಯವಾದಗಳು. 1 ಲಕ್ಷ 33 ಸಾವಿರ ಪದವೀಧರ ಮತದಾರರಿದ್ದರು. ನಮ್ಮ ಅಭ್ಯರ್ಥಿ ಇವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಹೋರಾಟ ಕಾರಣ ಎಂದರು.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ. ಈ ನಾಲ್ಕು ಜಿಲ್ಲೆಗಳ ಕಾರ್ಯಕರ್ತರು, ಪಕ್ಷದ ಅಧ್ಯಕ್ಷರುಗಳು, ಮಾಜಿ ಸಂಸದರು, ಶಾಸಕರು ಇವರೆಲ್ಲರ ಸಂಘಟಿತ ಹೋರಾಟದ ಮೂಲಕ ಚುನಾವಣೆ ಗೆದ್ದಿದ್ದೇವೆ. ಇದೇ ರೀತಿ ಬೆಳಗಾವಿಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್‌ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲೇ ಗೆಲುವಿನ ಕೋಟಾ ತಲುಪಿ ಗೆದ್ದಿದ್ದಾರೆ. ಚಲಾವಣೆಯಾದ 20,000 ಮತಗಳಲ್ಲಿ ನಮ್ಮ ಅಭ್ಯರ್ಥಿ 11,000 ಕ್ಕೂ ಅಧಿಕ ಮತ ಪಡೆದಿದ್ದಾರೆ. ಕಳೆದ ಎರಡು ಬಾರಿ ಅಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ್‌ ಅವರು ಗೆದ್ದಿದ್ದರು. ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರು ಮತ್ತು ಪದವೀಧರ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಪಕ್ಷ ನಾಲ್ಕೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ಜಂಭ ಹೊಡೆದಿದ್ದರು, ಮುಖ್ಯಮಂತ್ರಿಗಳೇ ಹೋಗಿ ಪ್ರಚಾರ ಮಾಡಿದ್ದರು. ನಮಗೆ ಸಂಪನ್ಮೂಲಗಳ ಕೊರತೆ ಇದ್ದಾಗ್ಯೂ ಕೂಡ ಪದವೀಧರರು ಮತ್ತು ಶಿಕ್ಷಕರು ನಮಗೆ ಆಶಿರ್ವಾದ ಮಾಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.