ಲಕ್ನೋ: ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಸಂಭವಿಸಿ, ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಂತಹ ಅಪಾಯಕಾರಿ ಪರಿಸ್ಥಿತಿ ಉಂಟಾಯಿತು. ಆದರೆ ಪೈಲಟ್‌ನ ಚುರುಕಾದ ನಿರ್ಧಾರ ಮತ್ತು ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ, ನೂರಾರು ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ರಾತ್ರಿ 10:45ರ ಸಮಯದಲ್ಲಿ ಜೆಡ್ಡಾ ನಿಲ್ದಾಣದಿಂದ ಹೊರಟಿದ್ದ ಎಸ್‌ವಿ3112 ಸಂಖ್ಯೆಯ ವಿಮಾನ, ಸುಮಾರು 250 ಹಜ್ ಯಾತ್ರಿಕರು ಮತ್ತು ಸಿಬ್ಬಂದಿಗಳನ್ನು ಕರೆದೊಯ್ಯುತ್ತಿತ್ತು. ಲಕ್ನೋ ವಿಮಾನ ನಿಲ್ದಾಣದ ಬಳಿ ಬೆಳಿಗ್ಗೆ ಸುಮಾರು 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಟೈರ್‌ನಿಂದ (ಚಕ್ರ) ಬೆಂಕಿಯ ಕಿಡಿಗಳು ಮತ್ತು ದಟ್ಟ ಹೊಗೆ ಹೊಮ್ಮಿದ ದೃಶ್ಯಗಳು ಆತಂಕ ಹುಟ್ಟಿಸಿವೆ.
ತಾಂತ್ರಿಕ ದೋಷ ಕಾಣಿಸಿಕೊಂಡ ತಕ್ಷಣವೇ ಪೈಲಟ್ ಸನ್ನದ್ಧತೆಯಿಂದ ತುರ್ತು ಭೂಸ್ಪರ್ಶ ನಡೆಸಿದ್ದು, ಲಕ್ನೋ ವಿಮಾನ ನಿಲ್ದಾಣದ ಅಗ್ನಿಶಾಮಕ ಹಾಗೂ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದಾಗಿ ಯಾವುದೇ ಭಾರೀ ಅಪಾಯ ಸಂಭವಿಸದಿದ್ದರೂ, ಪ್ಯಾಸೆಂಜರ್‌ಗಳು ಕೆಲವು ಕ್ಷಣ ಗಾಬರಿಗೊಂಡ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನ ಲೀಕ್ (ಸೋರಿಕೆ) ಇಡೀ ಘಟನೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ವಿಮಾನ ತಜ್ಞರ ಅನ್ವಯ, ಈ ದೋಷ ವಿಮಾನ ಟೇಕ್‌ಆಫ್ ಸಮಯದಲ್ಲಿ ಕಾಣಿಸಿಕೊಂಡಿದ್ದರೆ, ಆಕಾಶದಲ್ಲಿ ನಿರ್ವಹಿಸಲು ಬಹು ದೊಡ್ಡ ಅಪಾಯ ಉಂಟಾಗುತ್ತಿತ್ತು.














