ಮನೆ ರಾಜ್ಯ 13 ಮಂದಿ ಬಿಜೆಪಿ ಸಂಸದರ ತೇಜೋವಧೆ: ರಾಷ್ಟ್ರೀಯ ನಾಯಕರ ಮಧ್ಯೆ ಪ್ರವೇಶಕ್ಕೆ ಡಿ.ವಿ ಸದಾನಂದಗೌಡ ಆಗ್ರಹ

13 ಮಂದಿ ಬಿಜೆಪಿ ಸಂಸದರ ತೇಜೋವಧೆ: ರಾಷ್ಟ್ರೀಯ ನಾಯಕರ ಮಧ್ಯೆ ಪ್ರವೇಶಕ್ಕೆ ಡಿ.ವಿ ಸದಾನಂದಗೌಡ ಆಗ್ರಹ

0

ಬೆಂಗಳೂರು: ರಾಜ್ಯದಲ್ಲಿ ಆಯ್ಕೆಯಾಗಿರುವ 25 ಬಿಜೆಪಿ ಸಂಸದರ ಪೈಕಿ 13 ಮಂದಿ ನಾಲಾಯಕ್ ಸಂಸದರು ಎಂದು ತೇಜೋವಧೆ ಮಾಡುವ ಮೂಲಕ ಹಿರಿಯ ಸಂಸದರ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗುತ್ತಿದೆ. ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯದ ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಸಂಸದ ಹಾಗೂ ಮಾಜಿ‌ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆಗ್ರಹಿಸಿದ್ದಾರೆ.

Join Our Whatsapp Group

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದೆ. ಈ ಹಂತದಲ್ಲಿರುವಾಗಲೇ ಸಂಸದರನ್ನು ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಮಾನಹಾನಿ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆಯ್ಕೆಯಾಗಿರುವ 25 ಸಂಸದರ ಪೈಕಿ 13 ಮಂದಿ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮಾಡಿಲ್ಲ. ಇನ್ನೂ ಕೆಲ ಸಂಸದರು ಅನಾರೋಗ್ಯ ಪೀಡಿತರಾಗಿದ್ದಾರೆ.‌ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ರೀತಿಯಲ್ಲಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ.

ಮತದಾರರಿಂದ ಆಯ್ಕೆಗೊಂಡ ಸಂಸದರನ್ನು ತೇಜೋವಧೆ ಮಾಡುವ ಕೆಲಸ‌ ಎಷ್ಟು ಸರಿ? ಈ ಬಗ್ಗೆ ನನಗೆ 12 ಮಂದಿ ಸಂಸದರು ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ರಾಷ್ಟ್ರೀಯ ಹಾಗೂ ರಾಜ್ಯ ಬಿಜೆಪಿ ನಾಯಕರು‌ ಈ ಬಗ್ಗೆ ಇತಿಶ್ರೀ ಹಾಡಬೇಕಿದೆ. ಹಲವು ವಿಚಾರಗಳ ಬಗ್ಗೆ ತ್ವರಿತವಾಗಿ ಪ್ರಕಟಣೆ ಅಥವಾ ಸ್ಪಷ್ಟನೆ ನೀಡುವ ಬಿಜೆಪಿ ನಾಯಕರು, 13 ಮಂದಿ ಸಂಸದರ ಮಾನಹಾನಿ ಆಗುತ್ತಿರುವುದು ನೋಡಿಯೂ ಸ್ಪಷ್ಟನೆ ನೀಡದಿರುವುದು ತರವಲ್ಲ. ಇದು ರಾಜ್ಯಕ್ಕೆ ಬೇರೆ ರೀತಿಯ ಸಂದೇಶ ಹೋಗಲಿದೆ. ಆಗುತ್ತಿರುವ ಗೊಂದಲಕ್ಕೆ ಕೂಡಲೇ ಪರಿಹರಿಸುವ ಕೆಲಸವನ್ನು ಸಂಬಂಧಪಟ್ಟ ನಾಯಕರು ಮಾಡಬೇಕಿದೆ ಎಂದು ಆಗ್ರಹಿಸಿದರು.

ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಮತದಾರರು ಕಾಂಗ್ರೆಸ್​​ಗೆ ಜನಾದೇಶ ನೀಡಿದ್ದಾರೆ. ಆಗಿರುವ‌ ಲೋಪ ಸರಿಪಡಿಸಿಕೊಳ್ಳಬೇಕಿದೆ. ಸೋಲು ಕಂಡಾಗ ಆತ್ಮಾವಲೋಕನ ಮಾಡಿಕೊಳ್ಳುವುದು ವಾಡಿಕೆಯಿದೆ. ಇಂದಿನ ದಿನಗಳಲ್ಲಿ ಆತ್ಮಾಲೋಕನ ಮಾಡಿಕೊಳ್ಳುವುದಕ್ಕೆ ಆತ್ಮಗಳೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕಾರ್ಯ ವೈಖರಿ ಬಗ್ಗೆ ಕಾದು ನೋಡಿ ಅನಂತರವಷ್ಟೇ ಮುಂದಿನ ಹೋರಾಟಗಳಿಗೆ ಕಾರ್ಯಕರ್ತರನ್ನ ಅಣಿಗೊಳಿಸುವ ಕೆಲಸ ಮಾಡಬೇಕಿದೆ. ಅಲ್ಲಿವರೆಗೂ ತಾಳ್ಮೆಯಿಂದ‌ ಇರುಬೇಕು ಎಂದು ಡಿವಿಎಸ್ ಕಿವಿಮಾತು ಹೇಳಿದರು.