ಪ್ಯಾರಿಸ್: ಮೊದಲ ಸುತ್ತಿನಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದ್ದ ಗ್ರೀಕ್ ನ ಸ್ಟೆಫನಸ್ ಸಿಸಿಪಸ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯ 3ನೇ ಸುತ್ತಿಗೆ ಏರಿದ್ದಾರೆ. ಫ್ಯಾಬಿಯೊ ಫೊಗಿನಿ, ಅನ್ನಾ ಬ್ಲಿಂಕೋವಾ, ದರಿಯಾ ಕಸತ್ಕಿನಾ, ಎಲೆನಾ ಸ್ವಿಟೋಲಿನಾ ಕೂಡ ದ್ವಿತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ ವಿಶ್ವದ ನಂ.2 ಆಟಗಾರ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದರು. ಈ ನೆಚ್ಚಿನ ಟೆನಿಸಿಗನನ್ನು ಮಣಿಸಿದವರು ಬ್ರಝಿಲ್ ನ ಅರ್ಹತಾ ಆಟಗಾರ ಥಿಯಾಗೊ ಸೆಬೋತ್ ವೈಲ್ಡ್. 5 ಸೆಟ್‌ಗಳ ಜಿದ್ದಾಜಿದ್ದಿ ಕಾಳಗವನ್ನು ವೈಲ್ಡ್ 7-6 (7-5), 6-7 (6-8), 2-6, 6-3, 6-4ರಿಂದ ಗೆದ್ದರು.
ವೈಲ್ಡ್ ಪಾಲಿಗೆ ಇದು ದೊಡ್ಡ ಬೇಟೆ. ಆದರೆ ಆವೆಯಂಗಳದಲ್ಲಿ ಅವರು ಉತ್ತಮ ಪ್ರದ ರ್ಶನ ಕಾಯ್ದುಕೊಂಡು ಬಂದಿರುವುದನ್ನು ಮರೆ ಯುವಂತಿಲ್ಲ. ಇದೇ ಋತುವಿನಲ್ಲಿ ಕ್ಲೇ ಕೋರ್ಟ್ ನಲ್ಲೇ 2 ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆ ಇವರದಾಗಿದೆ. 4 ಗಂಟೆ, 15 ನಿಮಿಷಗಳ ಕಾಲ ಇವರ ರ್ಯಾಕೆಟ್ ಸಮರ ಸಾಗಿತು.
“ನಾನು ಜೂನಿಯರ್ ಹಂತದಿಂದಲೇ ಡ್ಯಾನಿಲ್ ಆಟವನ್ನು ನೋಡುತ್ತ ಬಂದಿದ್ದೇನೆ. ಗ್ರ್ಯಾನ್‌ಸ್ಲಾಮ್‌ನಲ್ಲಿ ಅವರನ್ನು ಸೋಲಿಸುವುದು ನನ್ನ ಕನಸಾಗಿತ್ತು. ಇದು ಬಹಳ ಬೇಗ ಈಡೇರಿದೆ. ನಾನ್ನ ಫೋರ್ ಹ್ಯಾಂಡ್ ಆಟ ವಿಲ್ಲಿ ಕ್ಲಿಕ್ ಆಯಿತು’ ಎಂಬುದಾಗಿ ವಿಶ್ವ ರ್‍ಯಾಂಕಿಂಗ್ ನಲ್ಲಿ 172ನೇ ಸ್ಥಾನದಲ್ಲಿರುವ ವೈಲ್ಡ್ ಪ್ರತಿಕ್ರಿಯಿಸಿದರು.
ಡೆನ್ಮಾರ್ಕ್ ನ 6ನೇ ಶ್ರೇಯಾಂಕದ ಹೋಲ್ಜರ್ ರೂನ್ ಮೊದಲ ಸುತ್ತು ದಾಟಲು ತುಸು ಪ್ರಯಾಸಪಟ್ಟರು. ಮೊದಲ ಸಲ ರೊಲ್ಯಾಂಡ್ ಗ್ಯಾರೋಸ್ ನಲ್ಲಿ ಆಡಲಿಳಿದ ಕ್ರಿಸ್ಟೋಫರ್ ಯುಬ್ಯಾಂಕ್ಸ್ ವಿರುದ್ಧ 4 ಸೆಟ್ ಗಳ ಕಾದಾಟ ನಡೆಸಬೇಕಾಯಿತು. ರೂನ್ ಗೆಲುವಿನ ಅಂತರ 6-4, 3-6, 7-6 (7-2), 6-2.
ಬುಧವಾರದ ದ್ವಿತೀಯ ಸುತ್ತಿನ ಮುಖಾ ಮುಖೀಯಲ್ಲಿ ಸ್ಟೆಫನಸ್ ಸಿಸಿಪಸ್ ಸ್ಪೇನ್ ನ ರಾಬರ್ಟೊ ಕಾರ್ಬಲ್ಲೆಸ್ ಬೇನ ಅವರನ್ನು 6-3, 7-6 (4), 6-2ರಿಂದ ಮಣಿಸಿದರು.
ಸ್ವಿಯಾಟೆಕ್ ಗೆ ಸುಲಭ ಜಯ
ವನಿತಾ ವಿಭಾಗದ ಹಾಲಿ ಚಾಂಪಿಯನ್, ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರನ್ನು 6-4, 6-0 ಅಂತರದಿಂದ ಸುಲಭದಲ್ಲಿ ಸೋಲಿಸಿದರು.
ಎದುರಾಳಿ ಕ್ಯಾಮಿಲಾ ಜಾರ್ಜಿ ಗಾಯಾಳಾಗಿ ಹಿಂದೆ ಸರಿದ ಕಾರಣ ಅಮೆರಿಕದ ಜೆಸ್ಸಿಕಾ ಪೆಗುಲಾ ಮೊದಲ ಸುತ್ತು ದಾಟಿದರು. ಆಗ ಪೆಗುಲಾ 6-2ರಿಂದ ಮೊದಲ ಸೆಟ್ ವಶಪಡಿಸಿಕೊಂಡಿದ್ದರು.
ಭಾರತೀಯರಿಗೆ ಸೋಲು
ಪುರುಷರ ಡಬಲ್ಸ್ ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ಜೀವನ್ ನೆಡುಂಶೆಜಿಯನ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಇವರೆದುರು ಬೆಲರೂಸ್ ನ ಇಲ್ಯ ಇವಾಶ್ಕ-ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ 6-3, 6-4 ಅಂತರದ ಗೆಲುವು ಸಾಧಿಸಿದರು.