ಮನೆ ರಾಜ್ಯ ಭಯೋತ್ಪಾದನೆ, ನಕ್ಸಲಿಸಂ ಮೊದಲಾದವುಗಳನ್ನು ನಿರ್ಮೂಲನೆ ಮಾಡಬೇಕು: ಸಚಿವ ಡಾ.ಕೆ.ಸುಧಾಕರ್‌

ಭಯೋತ್ಪಾದನೆ, ನಕ್ಸಲಿಸಂ ಮೊದಲಾದವುಗಳನ್ನು ನಿರ್ಮೂಲನೆ ಮಾಡಬೇಕು: ಸಚಿವ ಡಾ.ಕೆ.ಸುಧಾಕರ್‌

0

ದೇವನಹಳ್ಳಿ(Devanahalli): ಬಡತನ, ಅನಕ್ಷರತೆ, ಮೂಲಭೂತವಾದ, ಭಯೋತ್ಪಾದನೆ, ನಕ್ಸಲಿಸಂ ಮೊದಲಾದ ಸಮಸ್ಯೆಗಳು ಭೂತವಾಗಿ ದೇಶವನ್ನು ಕಾಡುತ್ತಿವೆ. 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇವುಗಳ ನಿರ್ಮೂಲನೆಗೆ ಕೆಲಸ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಧರ್ಮದ ಕಾರಣದಿಂದಾಗಿ, ಕೆಲ ಸ್ವಾರ್ಥಿಗಳಿಂದಾಗಿ ಭಾರತ ವಿಭಜನೆಯಾಯಿತು. ಈಗ ಬಡತನ, ಅನಕ್ಷರತೆ, ಮೂಲಭೂತವಾದ, ಭಯೋತ್ಪಾದನೆ, ನಕ್ಸಲಿಸಂ ಮೊದಲಾದ ಸವಾಲುಗಳು ದೇಶದ ಮುಂದಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರು ರಕ್ತ ಹರಿಸಿದ್ದರು. ಆದರೆ ನಾವು ಸುಭದ್ರ ದೇಶ ನಿರ್ಮಾಣಕ್ಕಾಗಿ ಬೆವರು ಹರಿಸಿ ಶ್ರಮಿಸಬೇಕಿದೆ ಎಂದರು.

ಬ್ರಿಟಿಷರು ಭಾರತೀಯರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದರು. ಸುಮಾರು 200 ವರ್ಷಗಳ ಸುದೀರ್ಘ ಹೋರಾಟದ ಬಳಿಕ ನಮಗೆ ಸ್ವಾತಂತ್ರ್ಯ ದೊರೆಯಿತು. ಲೋಕಮಾನ್ಯ ಬಾಲಗಂಗಾಧರ ತಿಲಕ್‌, ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌, ವೀರ ಸಾವರ್ಕರ್‌ ಮೊದಲಾದ ಹೋರಾಟಗಾರರು ಈ ಹೋರಾಟಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅಹಿಂಸೆಯ ಮೂಲಕವೂ ಸ್ವಾತಂತ್ರ್ಯ ತಂದುಕೊಡಲು ಸಾಧ್ಯ ಎಂಬುದನ್ನು ಮಹಾತ್ಮ ಗಾಂಧೀಜಿ ತೋರಿಸಿಕೊಟ್ಟರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ʼಮಾಡು ಇಲ್ಲವೇ ಮಡಿʼ ಎಂದು ಅವರು ನೀಡಿದ್ದ ಕರೆ ಇಂದಿಗೂ ಜನಜನಿತವಾಗಿದೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌, ʼನನಗೆ ರಕ್ತ ಕೊಡಿ, ನಾನು ಸ್ವಾತಂತ್ರ್ಯ ನೀಡುತ್ತೇನೆʼ ಎಂದು ಹೇಳಿದ್ದ ಮಾತು ಇಂದಿಗೂ ಸ್ಮರಣೀಯ. ಅದೇ ರೀತಿ ಭಗತ್‌ ಸಿಂಗ್‌ ಅವರು, ನನ್ನ ತ್ಯಾಗದಿಂದ ಮತ್ತಷ್ಟು ದೇಶಪ್ರೇಮಿಗಳು ಹುಟ್ಟುವಂತಾಗಲಿ ಎಂದು ನೇಣಿಗೇರುವಾಗ ಹೇಳಿದ್ದರು. ದೇಶದ ಪುನರ್‌ನಿರ್ಮಾಣ ಗುಡಿಸಲಿನಿಂದಲೇ ಆರಂಭವಾಗಬೇಕು ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ. ಸ್ವಾತಂತ್ರ್ಯದ ಆಶಯ ಈಡೇರಲು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸಾಂಸ್ಕೃತಿಕ ಸಮಾನತೆ ತರಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದರು. ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರನ್ನು ಈ ದಿನ ಸ್ಮರಿಸಬೇಕು ಎಂದರು.

ನಮ್ಮ ದೇಶದ ಯುವಜನರು ಸಾಧನೆಯಿಂದ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಗೂಗಲ್‌, ಮೈಕ್ರೋಸಾಫ್ಟ್‌ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರ ಸ್ಥಾನವನ್ನು ಭಾರತೀಯರು ತುಂಬಿದ್ದಾರೆ. ಇತ್ತೀಚೆಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳನ್ನು ಯುವಜನರು ಗೆದ್ದಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸಲು ಕ್ರಮ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಖೇಲೋ ಇಂಡಿಯಾದಿಂದಾಗಿ ಕ್ರೀಡೆಯಲ್ಲಿ ಈ ಸಾಧನೆಯಾಗಿದೆ ಎಂದರು.

ಕೋವಿಡ್‌ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಮಾಡಿದಾಗ ಜನರು ಉತ್ತಮವಾಗಿ ಸ್ಪಂದಿಸಿದರು. ಪ್ರತಿ ವೈದ್ಯರು, ಸಿಬ್ಬಂದಿ ಹಗಲಿರುಳು ದುಡಿದು ಕೋವಿಡ್‌ ಮಣಿಸಿದರು. ಎರಡು ಲಸಿಕೆ ಡೋಸ್‌ ಜೊತೆಗೆ ಮೂರನೇ ಡೋಸ್‌ ಕೂಡ ಉಚಿತವಾಗಿ ನೀಡಲಾಗಿದೆ. ಒಂದು ಲಸಿಕೆ ವಿದೇಶದಲ್ಲಿ ತಯಾರಾದರೆ ಭಾರತಕ್ಕೆ ಬರಲು ಎಷ್ಟೋ ವರ್ಷಗಳು ಬೇಕಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್‌ ಲಸಿಕೆ ನಮ್ಮ ದೇಶದಲ್ಲೇ ತಯಾರಾಗಿದೆ. ಇದೇ ಹೊಸ ಭಾರತ. ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಒಂದೂವರೆ ಲಕ್ಷ ರೂ. ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಎಸ್‌ಸಿ, ಎಸ್‌ಟಿ ವರ್ಗದವರಿಗೆ ಉಚಿತವಾಗಿ ವಿದ್ಯುತ್‌ ನೀಡುವ ಕಾರ್ಯಕ್ರಮ ಐತಿಹಾಸಿಕವಾಗಿದೆ ಎಂದು ವಿವರಿಸಿದರು.

ದೇವನಹಳ್ಳಿ ಜಿಲ್ಲಾಕೇಂದ್ರ

ದೇವನಹಳ್ಳಿಯು ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶ. 54 ಪೇಟೆಗಳು, 340 ಕ್ಕೂ ಅಧಿಕ ಕೆರೆಗಳ ನಿರ್ಮಾಣ, ಪರಿಸರ ಸಂರಕ್ಷಣೆ ಮೊದಲಾದ ಮಹತ್ವದ ಕ್ರಮಗಳನ್ನು ಅವರು ಜಾರಿ ಮಾಡಿದ್ದರು. ಅವರ ಆಡಳಿತದ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆ ತಂದಿದೆ. ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಸಲು ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದರು.