ಮನೆ ರಾಷ್ಟ್ರೀಯ ಇಂದಿರಾಗಾಂಧಿ 107ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ, ಖರ್ಗೆ, ರಾಹುಲ್ ನಮನ

ಇಂದಿರಾಗಾಂಧಿ 107ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ, ಖರ್ಗೆ, ರಾಹುಲ್ ನಮನ

0

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 107ನೇ ಜನ್ಮ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

Join Our Whatsapp Group

‘ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದಂದು ಗೌರವ ನಮನಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಮಾಡಿದ್ದಾರೆ.

‘ಉಕ್ಕಿನ ಮಹಿಳೆ’ ಇಂದಿರಾಗಾಂಧಿ ಜೀವನ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದೆ. ಇಂದಿರಾಗಾಂಧಿ ಜೀವನಪರ್ಯಂತ ಹೋರಾಟಗಾರ್ತಿ, ಧೀರೆ ಮತ್ತು ಕ್ರಿಯಾಶೀಲ ನಾಯಕತ್ವದ ಪ್ರತಿರೂಪವಾಗಿದ್ದರು. ದೇಶ ನಿರ್ಮಾಣಕ್ಕೆ ನಿಸ್ವಾರ್ಥ ಕೊಡುಗೆಯನ್ನು ಸಲ್ಲಿಸಿದ್ದರು. ಭಾರತದ ಏಕತೆ ಮತ್ತು ಅಖಂಡತೆ ಕಾಪಾಡಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆನಪಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ಅಜ್ಜಿ ಇಂದಿರಾಗಾಂಧಿ ಅವರ ಅಮೂಲ್ಯ ಚಿತ್ರಗಳನ್ನು ಹಂಚುವ ಮೂಲಕ ಜನ್ಮದಿನಾಚರಣೆಯನ್ನು ನೆನಪಿಸಿಕೊಂಡಿದ್ದಾರೆ.

‘ಧೈರ್ಯ ಮತ್ತು ಪ್ರೀತಿಗೆ ಅಜ್ಜಿ ಉದಾಹರಣೆಯಾಗಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯ ಹಾದಿಯಲ್ಲಿ ನಿರ್ಭಯವಾಗಿ ನಡೆಯಬೇಕು ಎಂಬುದನ್ನು ನಾನು ಕಲಿತದ್ದು ಅವರಿಂದಲೇ…ಅಜ್ಜಿಯ ನೆನಪುಗಳು ನನ್ನ ಶಕ್ತಿ, ಸದಾ ನನಗೆ ಮಾರ್ಗದರ್ಶನ ನೀಡುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ನನ್ನ ಅಜ್ಜಿ ಇಂದಿರಾಗಾಂಧಿ ಮಹಾರಾಷ್ಟ್ರದ ನಂದೂರ್‌ಬಾರ್‌ನಿಂದ ಸದಾ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುತ್ತಿದ್ದರು. ಆದಿವಾಸಿ ಸಮಾಜದ ಸಂಸ್ಕೃತಿಯು ಅತ್ಯುತ್ತಮ ಮತ್ತು ಅನನ್ಯವಾಗಿದೆ ಎಂದು ನಂಬಿದ್ದರು. ಏಕೆಂದರೆ ಅವರು ಪ್ರಕೃತಿಯನ್ನು ಗೌರವಿಸುತ್ತಾರೆ ಮತ್ತು ಸಂರಕ್ಷಿಸುತ್ತಾರೆ’ ಎಂದು ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.

‘ಇಂದಿರಾಗಾಂಧಿ ಪ್ರಧಾನಿಯಾದಾಗ ಆದಿವಾಸಿ ಸಮುದಾಯಗಳ ಸಬಲೀಕರಣಕ್ಕಾಗಿ ಹಲವು ಕಾನೂನುಗಳನ್ನು ರೂಪಿಸಿದರು. ಆದಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಬಡವರ ಏಳಿಗೆಗಾಗಿ ಕೆಲಸ ಮಾಡಿದರು’ ಎಂದು ಅವರು ತಿಳಿಸಿದ್ದಾರೆ.

‘ಇಂದು ಕಾಂಗ್ರೆಸ್ ಪಕ್ಷವು ಜಾತಿ ಆಧಾರಿತ ಜನಗಣತಿ ಮತ್ತು ಎಸ್‌ಟಿ/ಎಸ್‌ಟಿ/ಒಬಿಸಿ ಮೀಸಲಾತಿ ಮಿತಿಯನ್ನು ಶೇ 50ರಿಂದ ಹೆಚ್ಚಿಸುವ ಇಂದಿರಾಗಾಂಧಿಯವರ ಆಲೋಚನೆಗಳೊಂದಿಗೆ ಮುಂದೆ ಸಾಗುತ್ತಿದೆ. ಅಜ್ಜಿ, ನಿಮ್ಮ ಅಮೂಲ್ಯ ಸೇವೆ ಮತ್ತು ಮೌಲ್ಯಗಳ ಪಾಠಗಳು ಸದಾ ನಮ್ಮೊಂದಿಗೆ ಇರುತ್ತವೆ’ ಎಂದು ಹೇಳಿದ್ದಾರೆ.