ಮನೆ ರಾಜ್ಯ ಮೈಸೂರು ಒಡೆಯರ್  ಪಠ್ಯವನ್ನು ಕೈಬಿಟ್ಟ ನೂತನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ

ಮೈಸೂರು ಒಡೆಯರ್  ಪಠ್ಯವನ್ನು ಕೈಬಿಟ್ಟ ನೂತನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ

0

ಬೆಂಗಳೂರು(Bengaluru): 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿರುವ ‘ಮೈಸೂರು ಒಡೆಯರ್’ ಪಾಠದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್, 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಆಗ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್ ಹಾಗೂ ಕಮಿಷನರ್‌ಗಳಾದ ಮಾರ್ಕ್ ಕಬ್ಬನ್, ಎಲ್.ಬಿ. ಬೌರಿಂಗ್ ಅವರ ಪಠ್ಯಗಳನ್ನೂ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದೆ.

ಟಿಪ್ಪು ವ್ಯಕ್ತಿತ್ವ ಮತ್ತು ಸಾಧನೆಯಿಂದ ಮಿರ್ಜಾ ಇಸ್ಮಾಯಿಲ್‌ವರೆಗಿನ ಸುಮಾರು ಆರು ಪುಟಗಳ ಪಠ್ಯವನ್ನು ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಆ ಪಾಠದಲ್ಲಿ ಮೈಸೂರಿನ ಇತಿಹಾಸದಲ್ಲಿ 19ನೇ ಶತಮಾನದ ಆರಂಭದಿಂದ 20‌ನೇ ಶತಮಾನದ ಮಧ್ಯಂತರದವರೆಗೆ ಪ್ರಮುಖ ಪಾತ್ರ ವಹಿಸಿದ ಪ್ರಮುಖರ ಪರಿಚಯ ನೀಡಲಾಗಿತ್ತು. ಜೊತೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆಗಳನ್ನೂ ಪರಿಚಯಿಸಲಾಗಿತ್ತು‌. ಅಷ್ಟೂ ಭಾಗಕ್ಕೆ ಕತ್ತರಿ ಹಾಕಲಾಗಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪರಿಷ್ಕರಿಸಿದ್ದ ಪಠ್ಯದಲ್ಲಿ ಈ ಭಾಗ ಇತ್ತು.ಆದರೆ, ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ವೈಭವೀಕರಣವಿದೆ ಎಂದುಕತ್ತರಿ ಪ್ರಯೋಗಿಸಲು ಹೋಗಿರುವ ಚಕ್ರತೀರ್ಥ ಸಮಿತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಮುಖ ಸಾಧನೆಗಳನ್ನು ಕುರಿತು ಸುಮಾರು ಎರಡು ಪುಟಗಳ ವಿವರಗಳೂ ಸೇರಿದಂತೆ ಮೈಸೂರು ಒಡೆಯರ್ ಕಾಲಘಟ್ಟದ ಇತಿಹಾಸವನ್ನು ತೆಗೆದುಹಾಕಿದೆ.

7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿದ್ದ ‘ಭಕ್ತಿ ಪಂಥ ಮತ್ತು ಸೂಫಿ ಪರಂಪರೆ ‘ಎಂಬ ಪಾಠದಿಂದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಕನಕದಾಸರು ಮತ್ತು ಪುರಂದರದಾಸರನ್ನು ಕುರಿತ ಎಲ್ಲ ವಿವರಗಳನ್ನೂ ತೆಗೆದುಹಾಕಲಾಗಿದೆ. ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡು ಕರ್ನಾಟಕದ ಅಸ್ಮಿತೆಗೆ ಧಕ್ಕೆ ತರಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರಲ್ಲಿ ಬರಗೂರು ಸಮಿತಿಯು ಚಂದ್ರಗುಪ್ತ ಮೌರ್ಯನನ್ನು ಕುರಿತು ನೀಡಿದ್ದ ಅಂಶಗಳನ್ನು ತಿರುಚಿ, ಚಕ್ರತೀರ್ಥ ಸಮಿತಿ ಚಾಣಕ್ಯನನ್ನು ವೈಭವೀಕರಿಸಿದೆ ಎಂಬ ಟೀಕೆ ವ್ಯಕ್ತವಾಗಿದೆ.

ತಿರುಚಿದ ಮಾಹಿತಿ:

7ನೇ ತರಗತಿಯ ಸಮಾಜ ವಿಜ್ಞಾನ ಭಾಗ– 2ರಲ್ಲಿ ‘ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು’ ಪಾಠದಲ್ಲಿ ‘ಕಯ್ಯಾರ ಕಿಞ್ಞಣ್ಣ ರೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು’ ಎಂದಿತ್ತು. ಚಕ್ರತೀರ್ಥ ಸಮಿತಿಯು ಈ ವಾಕ್ಯವನ್ನು ‘ಕನ್ನಡದ ಮೊದಲ ‘ರಾಷ್ಟ್ರಕವಿ’ ಮಂಜೇಶ್ವರ ಗೋವಿಂದ ಪೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು  ಎಂದು ಬದಲಿಸಿದೆ.

ಬರಗೂರು ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿ ‘ಟಿಪ್ಪು ಸಹಾಯಕ್ಕೆ ಯಾರೂ ಬರಲಿಲ್ಲವಾದರೂ ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಿದನು. ಅಂತಿಮವಾಗಿ ಬ್ರಿಟಿಷರು ಮಂಗಳೂರು ಒಪ್ಪಂದ ಮಾಡಿಕೊಂಡರು’ ಎಂದು ಇದೆ. ಆದರೆ, ಚಕ್ರತೀರ್ಥ ಸಮಿತಿ ‘ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಲಾಗದೆ ಮಂಗಳೂರು ಒಪ್ಪಂದ ಮಾಡಿಕೊಂಡನು’ ಎಂದು ಇತಿಹಾಸವನ್ನೇ ತಿರುಚಿದೆ ಎಂಬ ಆರೋಪ ವ್ಯಕ್ತವಾಗಿದೆ.