ಬೆಂಗಳೂರು(Bengaluru): ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಪಾತಕಿಗೆ ಕ್ಷಮೆ ಎನ್ನುವುದೇ ಇರಬಾರದು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಟ್ಯೂಷನ್‌ಗೆ ತೆರಳಿದ್ದ 10 ವರ್ಷದ ಬಾಲಕಿಗೆ, ಅಲ್ಲಿನ ಕೆಲಸಗಾರನೇ ಚಾಕೊಲೇಟ್ ಆಸೆ ತೋರಿಸಿ ಹೊರಗೆ ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಆಘಾತಕಾರಿ ಪ್ರಕರಣ ಮಳವಳ್ಳಿಯಲ್ಲಿ ಮಂಗಳವಾರ ನಡೆದಿತ್ತು. ಮೃತದೇಹ ನೀರಿನ ಸಂಪ್‌ನಲ್ಲಿ ಪತ್ತೆಯಾಗಿತ್ತು. 50 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ. ಇಂಥ ಪಾತಕ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ತಪ್ಪು ಮಾಡಿದ ಅಪರಾಧಿಗೆ ಕಠಿಣ ಶಿಕ್ಷೆ ಆಗಲೇಬೇಕು ಹಾಗೂ ಆ ಪಾತಕಿಗೆ ಕ್ಷಮೆ ಎನ್ನುವುದೇ ಇರಬಾರದು. ಭವಿಷ್ಯದಲ್ಲಿ ಇಂಥ ನೀಚ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಇನ್ನೊಂದು ಟ್ವೀಟ್‌ನಲ್ಲಿ, ಹೆತ್ತ ಮಗುವನ್ನು ಕಳೆದುಕೊಂಡು ಶೋಕದಲ್ಲಿರುವ ಆ ಬಾಲಕಿಯ ಪೋಷಕರ ದುಃಖದಲ್ಲಿ ನಾನೂ ಭಾಗಿ. ನೂರುಕಾಲ ಬಾಳಿ ಬದುಕಬೇಕಿದ್ದ ಮಗುವಿನ ದುರ್ಮರಣ ನನಗೆ ಅತೀವ ನೋವುಂಟು ಮಾಡಿದೆ. ಆ ಬಾಲಕಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ತಂದೆ ತಾಯಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.