ಮೈಸೂರು: ಮಹಿಳಾ ಶಕ್ತಿಯನ್ನು ಸಬಲೀಕರಣಗೊಳಿಸಿ ಆರ್ಥಿಕವಾಗಿ ಪ್ರತಿಯೊಬ್ಬ ಮಹಿಳೆಯರು ಅಭಿವೃದ್ಧಿಯಾಗಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಂ. ಗಾಯತ್ರಿ ಅವರು ತಿಳಿಸಿದರು.
ಇಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಜಿಲ್ಲಾ ಪಂಚಾಯತ್ ಡಿ. ದೇವರಾಜು ಅರಸು ಸಭಾಂಗಣದಲ್ಲಿ ನೆಡೆದ ಜಿಲ್ಲಾ ಮಟ್ಟದ ಬ್ಯಾಂಕ್ ವ್ಯವಹಾರಗಳಿಗೆ,” ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ಸಂಪರ್ಕ ಮತ್ತು ಉದ್ಯಮ ಹಣಕಾಸು ವಿಷಯ ಕುರಿತು ಕಾರ್ಯಾಗಾರ”ದಲ್ಲಿ ಮಾತನಾಡಿದರು.
ಮಹಿಳೆಯರು ಕೇವಲ ಮನೆ ಕೆಲಸಗಳಿಗೆ ಹಾಗೂ ಗೃಹಿಣಿ ಕೆಲಸಗಳಿಗೆ ಸೀಮಿತವಾಗಿರದೆ, ಅವರು ಕೂಡ ದೊಡ್ಡ ಶಕ್ತಿಯಾಗಿ ಬೆಳೆಯಬೇಕು ಎಂಬುದ ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಆಶಯವಾಗಿದೆ ಎಂದು ತಿಳಿಸಿದರು.
ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ ಅದರ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಂಡು ತಮ್ಮ ಸ್ವಂತ ಶಕ್ತಿಯಿಂದ ಆರ್ಥಿಕವಾಗಿ ಸಬಲೀಕರಣ ಆಗುತ್ತಾ ಹೋಗಬಹುದು ಎಂಬುದಕ್ಕೆ ಈ ಯೋಜನೆಗಳು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಶಕ್ತಿಗಳನ್ನು ಯಾವ ರೀತಿಯಾಗಿ ನಾವು ಸ್ವಾವಲಂಬಿಯಾಗಿ ಮಾಡಬೇಕು, ಅವರಲ್ಲಿ ಇರುವಂತಹ ಜ್ಞಾನವನ್ನು ಯಾವ ರೀತಿ ಪೋತ್ಸಾಹ ನೀಡಬೇಕು, ಸ್ಥಳೀಯ ಪ್ರದೇಶಗಳಲ್ಲಿ ಸಿಗುವಂತಹ ಕಚ್ಚಾ ಪದಾರ್ಥಗಳಿಂದ ಸಣ್ಣ ಉದ್ಯಮವನ್ನು ಹೇಗೆ ದೊಡ್ಡ ಉದ್ಯಮವಾಗಿ ಮಾಡಬಹುದು. ವೈಯಕ್ತಿಕವಾಗಿ ಅಥವಾ ಗುಂಪು ಚಟುವಟಿಕೆ ಮಾಡುವುದರ ಮೂಲಕ ಹೇಗೆ ಉದ್ಯಮ ಮಾಡಬಹುದು ಎಂಬುದನ್ನು ಕುರಿತು ಅನೇಕ ಸಂಜೀವಿನಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ಹೇಳಿದರು.
ಬ್ಯಾಂಕ್ ವ್ಯವಹಾರವನ್ನು ಹೇಗೆ ಮಾಡಬೇಕು, ಉದ್ಯಮ ಹಣಕಾಸಿನ ವ್ಯವಹಾರ ಯಾವ ರೀತಿ ಮಾಡಬೇಕು, ಬ್ಯಾಂಕ್ ನೊಂದಿಗೆ ಯಾವ ರೀತಿ ಒಡನಾಟ ಇಟ್ಟುಕೊಂಡು ವ್ಯವಹಾರ ಮಾಡಬೇಕು ಮತ್ತು ಬ್ಯಾಂಕ್ ಗಳು ಯಾವ ರೀತಿ ಸಹಕಾರಿಯಾಗಿದೆ. ಯಾವ ಯೋಜನೆಗಳ ಮೂಲಕ ಯಾವ ಯಾವ ಲೋನ್ ಗಳನ್ನು ಪಡೆದುಕೊಳ್ಳಬಹುದು ಎಂಬುದು ಇವತ್ತಿನ ಕಾರ್ಯಾಗಾರದ ಚರ್ಚೆಯ ವಿಚಾರವಾಗಿದೆ. ಇದರ ಸದುಪಯೋಗವನ್ನು ಸಂಪೂರ್ಣವಾಗಿ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಗಾರದ ಪ್ರಮುಖ ಉದ್ದೇಶ ನಿಮ್ಮಲಿ ಇರುವಂತಹ ಕಚ್ಚಾ ಪದಾರ್ಥಗಳು ಮತ್ತು ಕೌಶಲ್ಯಗಳಿಗೆ ಸಹಕಾರಿಯಾಗಿ ಅಂದರೆ ಒಂದು ಉದ್ಯಮವನ್ನು ಪ್ರಾರಂಭ ಮಾಡಲು ಅಗತ್ಯ ಇರುವಂತಹ ಮೂಲ ಹಣಕಾಸಿನ ವ್ಯವಸ್ಥೆಯನ್ನು ಸಾಲದ ರೂಪದಲ್ಲಿ ಬ್ಯಾಂಕ್ ಗಳು ತಮ್ಮ ಉದ್ಯಮವನ್ನು ಸ್ಥಾಪಿಸುವುದಕ್ಕೆ ಯಾವ ರೀತಿ ಸಹಕಾರ ನೀಡುತ್ತವೆ ಎಂಬುದನ್ನು ಕುರಿತು ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಸಹ ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮಲಿ ಇರುವಂತಹ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಾಮಕೃಷ್ಣ ಮಾನೆ ಅವರು ಆನೇಕ ಯೋಜನೆಗಳ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗಳಿಗೆ ತಿಳಿಸಿಕೊಡಲು ಸೆಷನ್ ಅನ್ನು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ನಾಗೇಶ್ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಪಿರಿಯಾಪಟ್ಟಣದ ಶಿಶು ಸಮಗ್ರ ಅಭಿವೃದ್ಧಿ ಯೋಜನಾಧಿಕಾರಿಯಾದ ಮಮತ, ಸೇರಿದಂತೆ ವಿವಿಧ ಬ್ಯಾಂಕ್ ಗಳ ಮ್ಯಾನೇಜರ್ ಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.














