ಪಾಂಡವಪುರ: ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಹುಂಡಿ ಕದಿಯಲು ಯತ್ನಿಸುತ್ತಿದ್ದ ಖದೀಮನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಗ್ರಾಮ ದೇವತೆಯಾದ ವೀರಾಂಜನೇಯ
ಸ್ವಾಮಿ ದೇವಸ್ಥಾನದ ಮುಖ್ಯ ದ್ವಾರವನ್ನು ಕಬ್ಬಿಣದ ರಾಡ್ನಿಂದ ಮೀಟಿ ಒಳಹೊಕ್ಕಿದ್ದ ನಾಲ್ವರು ಖದೀಮರ ತಂಡ ದೇವರ ಗರ್ಭಗುಡಿ ಮುಂದಿದ್ದ ಹುಂಡಿ ಒಡೆದು ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಲು ಯತ್ನಿಸಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿ ಹುಂಡಿ ಡಬ್ಬದ ಶಬ್ಧವನ್ನು ಗ್ರಹಿಸಿ ಹೊರ ಬಂದ ಗ್ರಾಮದ ಕೆಲವರಿಗೆ ದೇವಸ್ಥಾನಕ್ಕೆ ಕನ್ನ ಹಾಕಿರುವುದು ಗೊತ್ತಾಗಿದೆ. ಗ್ರಾಮದ ಹತ್ತಾರು ಯುವಕರು ಒಗ್ಗೂಡಿ ಧೈರ್ಯದಿಂದ ಖದೀಮರನ್ನು ಹಿಡಿಯಲು ಮುಂದಾದ ವೇಳೆ ನಾಲ್ವರು ಕಳ್ಳರ ಪೈಕಿ ಮೂವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಮೈಸೂರು ಮೂಲದ ಮುಬಾರಕ್ ಎಂಬಾತನನ್ನು ಹಿಡಿದ ಗ್ರಾಮಸ್ಥರು ಯಾವುದೇ ರೀತಿ ಹಲ್ಲೆ ನಡೆಸದೆ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಖದೀಮನನ್ನು ಬಂಧಿಸಿ ಠಾಣೆಗೆ ಕರೆದೊಯ್ದುದರು.
ಗ್ರಾಮದ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಇದೇ ರೀತಿ ಕಳ್ಳತನ ಪ್ರಕರಣಗಳು ಜರುಗಿದ್ದು, ಹಿಂದೆ ನಡೆದಿರುವ ಕಳ್ಳತನಕ್ಕೂ ಬಂಧಿತ ಕಳ್ಳನಿಗೂ ಏನಾದರೂ ಸಂಬಂಧ ಇದ್ದೀಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಹಾಗೂ ತಪ್ಪಿಸಿಕೊಂಡಿರುವ ಕಳ್ಳರನ್ನು ತಕ್ಷಣ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














