ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ತಡೆ ನೀಡಿರುವ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಹಾರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್’ನಲ್ಲಿ ಮೇಲ್ಮನವಿ ಸಲ್ಲಿಸಿದೆ. ವಾಸ್ತವದಲ್ಲಿ, ರಾಜ್ಯ ಸರ್ಕಾರವು ನಡೆಸಿರುವುದ ಜಾತಿ ಸಮೀಕ್ಷೆಯಲ್ಲ, ಬದಲಿಗೆ ಜಾತಿ ಗಣತಿ ಎಂದು ಹೈಕೋರ್ಟ್ ಮಧ್ಯಂತರ ಪರಿಹಾರದ ವೇಳೆ ಹೇಳಿತ್ತು.
ಮಧ್ಯಂತರ ಪರಿಹಾರದ ಹಂತದಲ್ಲಿ ಪ್ರಕರಣದ ವಿಚಾರಣಾರ್ಹತೆಯನ್ನು ತಪ್ಪಾಗಿ ಹೈಕೋರ್ಟ್ ಪರಿಶೀಲಿಸಿದೆ. ಅಲ್ಲದೇ, ರಾಜ್ಯದ ಶಾಸಕಾಂಗದ ಪರಿಧಿಗೆ ಕೈಹಾಕಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಬಿಹಾರ ರಾಜ್ಯ ಸರ್ಕಾರವು ಆಕ್ಷೇಪಿಸಿದೆ.
“ಮಧ್ಯಂತರ ಹಂತದಲ್ಲಿನ ಪರಿಹಾರ ಮತ್ತು ತೀರ್ಮಾನಗಳು ಅಂತಿಮ ಪರಿಹಾರದಂತೆಯೇ ಆಗುವ ಸಾಧ್ಯತೆ ಇದೆ, ಆ ಮೂಲಕ ಇಡೀ ರಿಟ್ ಅರ್ಜಿಯೇ ನಿಷ್ಫಲವಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಶೇ. 80ರಷ್ಟು ಸಮೀಕ್ಷೆ ಕೆಲಸ ಪೂರ್ಣಗೊಂಡಿದೆ. ನ್ಯಾಯಾಲಯ ಅಂತಿಮ ತೀರ್ಪಿಗೆ ಒಳಪಟ್ಟು ಸಮೀಕ್ಷೆ ಪೂರ್ಣಗೊಳಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ… ಸಮೀಕ್ಷೆ ಪೂರ್ಣಗೊಳಿಸಲು ನೀಡಿರುವ ಕಾಲಮಿತಿಯು ಸಮೀಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ಏಕೆಂದರೆ ಇದು ಸಮಕಾಲೀನ ದತ್ತಾಂಶವಾಗಿರುವುದಿಲ್ಲ” ಎಂದು ಸರ್ಕಾರ ಹೇಳಿದೆ.
ಹಾಲಿ ಚಾಲ್ತಿಯಲ್ಲಿರುವ ಜಾತಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿ ವಿಚಾರಣೆಯ ಭಾಗವಾಗಿ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಲಿಸಿ, ಹೈಕೋರ್ಟ್ ತಡೆ ನೀಡಿದೆ.
ಬಿಹಾರ ಸರ್ಕಾರದ ಜಾತಿ ಸಮೀಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್ ಕಳೆದ ಜನವರಿಯಲ್ಲಿ ನಿರಾಕರಿಸಿತ್ತು. ಅದಾಗ್ಯೂ, ಪಾಟ್ನಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರ ನೇತೃತ್ವದ ವಿಭಾಗೀಯ ಪೀಠವು ನೀಡಿತ್ತು.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಪಾಟ್ನಾ ಹೈಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೊದಲಿಗೆ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಆನಂತರ ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಮಧ್ಯಂತರ ಪರಿಹಾರದ ಕುರಿತು ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಸಮೀಕ್ಷೆಯು ವಾಸ್ತವಿಕವಾಗಿ ಗಣತಿಯಾಗಿದ್ದು, ಅದನ್ನು ಕೇಂದ್ರ ಸರ್ಕಾರ ಮಾತ್ರ ನಡೆಸಬೇಕು ಎಂದು ಪಾಟ್ನಾ ಹೈಕೋರ್ಟ್’ನ ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾ. ಮಧುರೇಶ್ ಪ್ರಸಾದ್ ಅವರ ನೇತೃತ್ವದ ವಿಭಾಗೀಯ ಪೀಠವು ಮೇ 4ರಂದು ಆದೇಶಿಸಿತ್ತು. ಅಲ್ಲದೇ, ಜುಲೈ 3ರವರೆಗೆ ಸಮೀಕ್ಷೆಗೆ ಹೈಕೋರ್ಟ್ ತಡೆ ನೀಡಿತ್ತು. ಇಡೀ ಗಣತಿಗೆ ತಡೆ ನೀಡಿಲ್ಲ. ಮುಂದೆ ದತ್ತಾಂಶ ಸಂಗ್ರಹ ಮತ್ತು ಅದನ್ನು ರಾಜಕೀಯ ಪಕ್ಷಗಳ ಜೊತೆ ಹಂಚಿಕೆಗೆ ತಡೆ ನೀಡಲಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಹಾರ ಸರ್ಕಾರವು ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.