ಮನೆ ರಾಜ್ಯ ಜನರ ಬದುಕನ್ನು ಜಟಕಾ ಬಂಡಿ ಮಾಡಿದ ಬಿಜೆಪಿ ಸರ್ಕಾರ: ಎಂ. ಲಕ್ಷ್ಮಣ್

ಜನರ ಬದುಕನ್ನು ಜಟಕಾ ಬಂಡಿ ಮಾಡಿದ ಬಿಜೆಪಿ ಸರ್ಕಾರ: ಎಂ. ಲಕ್ಷ್ಮಣ್

0

ಮೈಸೂರು: ಬಿಜೆಪಿ ಸರ್ಕಾರವು ಕರ್ನಾಟಕದ ಜನರ ಬದುಕನ್ನು ಜಟಕಾ ಬಂಡಿ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ‘ಬಿಜೆಪಿಯ ನಿಜ ಕನಸುಗಳು’ ಎಂಬ ಭಿತ್ತಿಪತ್ರವನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದುರಾಡಳಿತ, ಭ್ರಷ್ಟಾಚಾರ ಹಾಗೂ ಕೋಮು ಸಂಘರ್ಷವನ್ನು ಉಂಟು ಮಾಡುವುದೇ ಬಿಜೆಪಿಯ ನಿಜ ಕನಸುಗಳಾಗಿವೆ ಎಂದು ಆಪಾದಿಸಿದರು.

ಬಿಜೆಪಿ ದುರಾಡಳಿತದಿಂದ ಗಾರ್ಡನ್‌ ಸಿಟಿ ಗಲೀಜ್ ಸಿಟಿಯಾಗಿದೆ ಮತ್ತು ಐಟಿ ಸಿಟಿ ಲೂಟಿ ಸಿಟಿಯಾಗಿದೆ. ರಾಜ್ಯದಾದ್ಯಂತ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿಗಳನ್ನು ಮುಚ್ಚುವುದಕ್ಕೆ ಕಮಿಷನ್ ಪಡೆಯಲಾಗುತ್ತಿದೆ. ಈ ಸರ್ಕಾರ ಬಂದ ನಂತರ 10ಸಾವಿರ ರೌಡಿಶೀಟರ್‌’ಗಳು ಸೇರ್ಪಡೆಯಾಗಿದ್ದಾರೆ. ಬಿಜೆಪಿ ವಿರುದ್ಧವಿರುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಿದ್ದಾರೆ ಹಾಗೂ ಮಾಹಿತಿಯನ್ನು ಕದಿಯುತ್ತಿದ್ದಾರೆ ಎಂದು ದೂರಿದರು.

ಮಕ್ಕಳ ಮೇಲಿನ ಅಪರಾಧ ಶೇ 18ರಷ್ಟು ಹೆಚ್ಚಾಗಿದೆ. ಹಾಲು, ಮೊಸರು, ಅಡುಗೆ ಅನಿಲ ಸಿಲಿಂಡರ್‌ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದರು.

ಈ ಸರ್ಕಾರವು ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಪರಿಶಿಷ್ಟರ ಮೀಸಲಾತಿ ಹೆಚ್ಚಳದ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದು, ಕೇಂದ್ರ ಸರ್ಕಾರದ ಮೂಲಕ 9ನೇ ಶೆಡ್ಯೂಲ್‌’ಗೆ ಸೇರಿಸಿಲ್ಲ. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗಿವೆ. ಆ ವರ್ಗಕ್ಕೆ ಮೀಸಲಾದ ಅನುದಾನ ಬಳಕೆಯಾಗಿಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಅಲ್ಪಸಂಖ್ಯಾತರ ಇಲಾಖೆಯ ಅನುದಾನಕ್ಕೆ ಕತ್ತರಿ ಹಾಕಿ ಅವರನ್ನು 2ನೇ ದರ್ಜೆ ಪ್ರಜೆಗಳನ್ನಾಗಿ ನೋಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ಪ್ರಾಧಿಕಾರಗಳ ನೇಮಕಾತಿಯಲ್ಲಿ ಲಂಚ ತಾಂಡವವಾಡುತ್ತಿದೆ. ಯುವಜನರ ಭವಿಷ್ಯ ಕರಾಳ ಸ್ಥಿತಿ ತಲುಪಿದೆ. ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ಹಿಂಪಡೆದಿಲ್ಲ. ರಸಗೊಬ್ಬರ ಬೆಲೆ ಏರಿಕೆಯಾಗಿದ್ದು, ರೈತರು ತತ್ತರಿಸಿ ಹೋಗಿದ್ದಾರೆ. ಶೇ 40ರಷ್ಟು ಸರ್ಕಾರ ಇದಾಗಿದ್ದು, ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರಿಗೆ ಶೇ 40ರಷ್ಟು ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ನಾಗಭೂಷಣ್, ಗಿರೀಶ್ ಹಾಗೂ ಮುಖಂಡ ಬಿ.ಎಂ.ರಾಮು ಇದ್ದರು.