ಮನೆ ರಾಜ್ಯ ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದ ಮುಖ್ಯ ಆಯುಕ್ತರು

ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದ ಮುಖ್ಯ ಆಯುಕ್ತರು

0

ಬೆಂಗಳೂರು (Bengaluru)- ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ಮಳೆ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ರಸ್ತೆ ಗುಂಡಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚಿಸಿದರು.
ನಗರದಲ್ಲಿ ಇದುವರೆಗೆ ಗುರುತಿಸಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಯಾ ವಲಯಗಳ ಮುಖ್ಯ ಅಭಿಯಂತರರು ಪಾಲಿಕೆಯ ಬ್ಯಾಚ್ ಮಿಕ್ಸ್ ಪ್ಲಾಂಟ್ ಜೊತೆ ಸಮನ್ವಯ ಸಾಧಿಸಿ ಅಗತ್ಯ ಡಾಂಬರನ್ನು ಪಡೆದು ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
ಬ್ಯಾಚ್ ಮಿಕ್ಸ್ ಪ್ಲಾಂಟ್ ನಿಂದ ಬರುವ ಡಾಂಬರಿನ ಪ್ರಮಾಣವನ್ನು ಸರಿಯಾಗಿ ಪರಿಶೀಲಿಸಬೇಕು. ಜೊತೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಬಿದ್ದ ಸ್ಥಳವನ್ನು ಶುಚಿಮಾಡಿ ವೆಟ್ ಮಿಕ್ಸ್(ಹಸಿ ಜೆಲ್ಲಿ ಮಿಶ್ರಣ) ಹಾಕಿದ ನಂತರ ಡಾಂಬರನ್ನು ಹಾಕಿ ರೋಲರ್ ಮೂಲಕ ಸಮತಟ್ಟು ಮಾಡಬೇಕು ಎಂದು ಅಧಿಕಾರಿಗಳಿಗೆ ‌ಸೂಚಿಸಿದರಲ್ಲದೇ, ಸದರಿ ಕಾರ್ಯವನ್ನು ಹಗಲು-ರಾತ್ರಿ ಖುದ್ದು ಪರಿಶೀಲನೆ ನಡೆಸುವಂತೆ ವಲಯ ಆಯುಕ್ತರು/ಜಂಟಿ ಆಯುಕ್ತರು ರವರುಗಳಿಗೆ ಸೂಚಿಸಿದರು.
ಬಿಬಿಎಂಪಿಯ ಬ್ಯಾಚ್ ಮಿಕ್ಸ್ ಪ್ಲಾಂಟ್ ನಿಂದ ಎಲ್ಲಾ ವಲಯಗಳಿಗೂ ಸೇರಿ ಪ್ರತಿನಿತ್ಯ 25 ಲೋಡ್(ಹಗಲು 18 ಲೋಡ್, ರಾತ್ರಿ 7 ಲೋಡ್) ಕಡ್ಡಾಯವಾಗಿ ಕಳುಹಿಸಬೇಕು. ಈ ಮೂಲಕ ಆಯಾ ವಲಯಗಳಲ್ಲಿ ಗುರುತಿಸಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಅದನ್ನು ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ತಾಣಗಳಲ್ಲಿ ಪ್ರವಾಹ ಆಗದಂತೆ ಮುಂಜಾಗ್ರತಾ ಕ್ರಮವಹಿಸಿ:
ನಗರದಲ್ಲಿ 27 ಅತಿ ಸೂಕ್ಷ್ಮ ತಾಣ ಹಾಗೂ 45 ಸೂಕ್ಷ್ಮ ತಾಣ ಸೇರಿದಂತೆ 72 ಪ್ರವಾಹ ತಾಣಗಳಿದ್ದು, ಅಂತಹ ಪ್ರದೇಶದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರವಾಹ ತಾಣಗಳ ಬಳಿ ಸಂಪೂರ್ಣವಾಗಿ ಹೂಳೆತ್ತುವ ಕಾರ್ಯ ಆಗಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾಂಡ್ ಬ್ಯಾಗ್ಸ್(ಮರಳು ಮೂಟೆಗಳು) ಗಳನ್ನು ಲಭ್ಯವಿಟ್ಟುಕೊಳ್ಳಬೇಕು. ಇದಲ್ಲದೆ ಪರ್ಯಾಯ ಮಾರ್ಗವಾಗಿ ಪೈಪ್ ಅಳವಡಿಸಿ ಆ ಮೂಲಕ ನೀರು ಬೇರೆಡೆ ಹೋಗುವ ವ್ಯವಸ್ಥೆ ಕಲ್ಪಿಸಬೇಕೆಂದು ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ರವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಎಲ್ಲಾ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ತರು, ಎಲ್ಲಾ ಮುಖ್ಯ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ‌ಉಪಸ್ಥಿತರಿದ್ದರು.

ಹಿಂದಿನ ಲೇಖನರಾಜ್ಯದಲ್ಲಿ 196 ಮಂದಿಗೆ ಕೋವಿಡ್ ಪಾಸಿಟಿವ್
ಮುಂದಿನ ಲೇಖನಮೇ 29ರ ಹವಾಮಾನ ವರದಿ