ವಿವಿಧ ಹೈಕೋರ್ಟ್’ಗಳ ಐವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ ಮಂಗಳವಾರ ಶಿಫಾರಸ್ಸು ಮಾಡಿದೆ.
1. ನ್ಯಾ. ಪಂಜಕ್ ಮಿತ್ತಲ್ (ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ);
2. ನ್ಯಾ. ಸಂಜಯ್ ಕರೋಲ್ (ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ);
3. ನ್ಯಾ. ಪಿ ವಿ ಸಂಜಯ್ ಕುಮಾರ್ (ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ);
4. ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ (ಪಟ್ನಾ ಹೈಕೋರ್ಟ್ ನ್ಯಾಯಮೂರ್ತಿ);
5. ನ್ಯಾ. ಮನೋಜ್ ಮಿಶ್ರಾ (ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ).
ಕೊಲಿಜಿಯಂ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರವು ಅನುಮೋದಿಸಿದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಲಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ 34 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಹಾಲಿ 28 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸದಸ್ಯರ ಸಂಖ್ಯೆ 6ಕ್ಕೆ ಏರಿಕೆ: ಸುಪ್ರೀಂ ಕೋರ್ಟ್ ಕೊಲಿಜಿಯಂ, ಮುಖ್ಯ ನ್ಯಾಯಮೂರ್ತಿ ಹಾಗೂ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ಆದರೆ, ಈಗ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೊಲಿಜಿಯಂನ ಭಾಗವಾಗಿರುವುದರಿಂದ ಸದಸ್ಯರ ಸಂಖ್ಯೆ ಆರಕ್ಕೆ ಏರಿದೆ.
ಸದಸ್ಯರಾಗಿರುವ ಉಳಿದ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಯಾರೂ ಭವಿಷ್ಯದಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಹುದ್ದೆಗೇರುವುದಿಲ್ಲ. ಹೀಗಾಗಿ, ಇವರ ಪೈಕಿ ಯಾರೂ ಕೊಲಿಜಿಯಂನ ಮುಖ್ಯಸ್ಥರಾಗುವುದಿಲ್ಲ. ಈ ಕಾರಣಕ್ಕಾಗಿ ನ್ಯಾಯಮೂರ್ತಿ ಖನ್ನಾ ಅವರನ್ನು ಕೊಲಿಜಿಯಂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಿಜೆಐ ಚಂದ್ರಚೂಡ್ ಅವರು 2024ರ ನವೆಂಬರ್ 11ರಂದು ನಿವೃತ್ತರಾಗುವರು. ನಂತರ, ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಲಿದ್ದಾರೆ.