ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಹಿರಿಯ ನ್ಯಾಯವಾದಿ ಕೆ ವಿ ವಿಶ್ವನಾಥನ್ ಅವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಸೋಮವಾರ ಶಿಫಾರಸು ಮಾಡಿದೆ.
ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಈ ಕುರಿತ ನಿರ್ಣಯವನ್ನು ಮೇ 16ರಂದು ಪ್ರಕಟಿಸಲಾಗಿದೆ.
ಅಕ್ಟೋಬರ್ 13, 2021ರಂದು ನ್ಯಾ. ಮಿಶ್ರಾ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್’ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು. ಛತ್ತೀಸ್’ಗಢ ಹೈಕೋರ್ಟ್’ನ ನ್ಯಾಯಮೂರ್ತಿಯಾಗಿದ್ದ ಅವರು ಅದೇ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇನ್ನು ಶಿಫಾರಸಿನ ವೇಳೆ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ವಕೀಲರ ವರ್ಗದಿಂದ ಕೇವಲ ಒಬ್ಬರನ್ನ ಮಾತ್ರ ನ್ಯಾಯಮೂರ್ತಿ ಸ್ಥಾನಕ್ಕೆ ಪರಿಗಣಿಸಿದೆ.
“(ಕೊಲಿಜಿಯಂ ಸದಸ್ಯರ) ಪರಿಗಣಿತ ಅಭಿಪ್ರಾಯದಲ್ಲಿ ಹಿರಿಯ ವಕೀಲರಾದ ಶ್ರೀ ಕೆ.ವಿ. ವಿಶ್ವನಾಥನ್ ಅವರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅತ್ಯಂತ ಸೂಕ್ತರು” ಎಂದು ಶಿಫಾರಸು ಪತ್ರದಲ್ಲಿ ತಿಳಿಸಲಾಗಿದೆ.
ಮೂವತ್ನಾಲ್ಕು ನ್ಯಾಯಮೂರ್ತಿಗಳ ಸಾಮರ್ಥ್ಯದ ಸುಪ್ರೀಂ ಕೋರ್ಟ್’ನಲ್ಲಿ ಪ್ರಸ್ತುತ ಮೂವತ್ತೆರಡು ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜುಲೈ ಎರಡನೇ ವಾರದ ವೇಳೆಗೆ ಇನ್ನೂ ನಾಲ್ಕು ಹುದ್ದೆಗಳು ಖಾಲಿಯಾಗಲಿದ್ದು, ನ್ಯಾಯಮೂರ್ತಿಗಳ ಸಂಖ್ಯಾಬಲ ಇಪ್ಪತ್ತೆಂಟಕ್ಕೆ ಇಳಿಯಲಿದೆ.