ಬೆಂಗಳೂರು(Bengaluru): ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು ಎಂಬ ಪ್ರಧಾನಿ ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮಾನ್ಯ ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿಯವರ ಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ:
ಕುಟುಂಬ ಪಕ್ಷಗಳ ಟೀಕೆ ನೆಪವಷ್ಟೇ. ಪ್ರಧಾನಿಯವರ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ. ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ. ಇಂಥ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಏನೆಲ್ಲ ಅಡ್ಡದಾರಿ ಹಿಡಿಯಿತು ಎನ್ನುವುದು ಗುಟ್ಟೇನಲ್ಲ ಎಂದಿದ್ದಾರೆ.
ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಹೋರಾಟದ ಫಲಗಳಲ್ಲಿ ಜನಸಂಘವೂ ಒಂದು. ತುರ್ತು ಪರಿಸ್ಥಿತಿ ಹೇರಿದಾಗ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನೂರಾರು ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸಿದ್ದು ಅವರೇ. ಇವೆಲ್ಲಾ ಒಟ್ಟಾಗಿ ʼಜನತಾ ಪರಿವಾರʼ ಉದಯ ಆಯಿತು. ಈ ಪರಿವಾರ ಹಂತಹಂತವಾಗಿ ಬೆಳೆದು ಹೆಮ್ಮರವಾಗಿ, ಕ್ರಮೇಣ ಅನೇಕ ಟಿಸಿಲುಗಳೊಡೆದು ಬೇರೆ ಬೇರೆಯಾಯಿತು. ಬಿಜೆಪಿಯೂ ಈ ಪರಿವಾರದ ಒಂದು ತುಣುಕಷ್ಟೇ. ಜೆಡಿಎಸ್, ಜೆಡಿಯು, ಆರ್ʼಜೆಡಿ, ಬಿಜೆಡಿ, ಸಮಾಜವಾದಿ ಪಕ್ಷಗಳೆಲ್ಲ ಈ ಮಹಾವೃಕ್ಷದ ರೆಂಬೆ-ಕೊಂಬೆಗಳೇ ಎಂದು ತಿಳಿಸಿದ್ದಾರೆ.
ಜನತಾ ಪರಿವಾರದ ಟಿಸಿಲುಗಳು ದೇಶದ ಉದ್ದಗಲಕ್ಕೂ ಬೃಹತ್ ವೃಕ್ಷಗಳಾಗಿ ಬೆಳೆದು ನಿಂತಿವೆ. ಅವುಗಳ ಬೇರುಗಳು ಆಳಕ್ಕಿಳಿದು ಬಲಿಷ್ಠವಾಗಿವೆ; ಕೀಳುವುದು, ಅಲ್ಲಾಡಿಸುವುದು ಸುಲಭವಲ್ಲ. ಮೋದಿ ಅವರಿಗೆ ಈ ವಿಷಯವೂ ತಿಳಿಯದ್ದೇನಲ್ಲ. ಜನಸಂಘ ಬಿಜೆಪಿಯಾಗಿ ರೂಪಾಂತರಗೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದು ತನ್ನ ಸ್ವಂತ ಶಕ್ತಿಯಿಂದೇನಲ್ಲ. ಇದೇ ಕುಟುಂಬ ಕೇಂದ್ರಿತ ಪಕ್ಷಗಳ ಊರುಗೋಲಿನಿಂದ. NDA ಹುಟ್ಟಿದ್ದು ಹೇಗೆ? ಹುಟ್ಟಿದಾಗ ಎಷ್ಟು ಪಕ್ಷಗಳಿದ್ದವು? ಈಗೆಷ್ಟಿವೆ? ಈ ಮಾಹಿತಿ ಮೋದಿ ಅವರ ಮನದಲ್ಲಿ ಇರಬೇಕಿತ್ತು ಎಂದಿದ್ದಾರೆ.
ಭ್ರಷ್ಟಚಾರ ನಿತ್ಯ ಆಚಾರ:
ಲೊಕಸಭೆಯಲ್ಲಿ ಈಗ ಬಿಜೆಪಿಗೆ 303 ಸೀಟುಗಳಿವೆ. ಆದರೆ, ಎಷ್ಟು ಸೀಟುಗಳಿಂದ ಈ ಅಂಕಿ ಆರಂಭವಾಯಿತು? ಆ ಪಕ್ಷದ ಪ್ರಯಾಣ ಶುರುವಾಗಿದ್ದು ಎಲ್ಲಿಂದ? ಮೊದಲಿನದ್ದೆಲ್ಲವನ್ನೂ ಮೋದಿ ಮರೆತರೆ ಹೇಗೆ? ಈಗಲೂ ಅವರು ಟೀಕಿಸಿದ ಕುಟುಂಬ ಕೇಂದ್ರಿತ ಪಕ್ಷಗಳು NDA ಕೂಟದಲ್ಲಿವೆಯಲ್ಲಾ!! ಇತ್ತೀಚೆಗೆ, ನಿತ್ಯವೂ ಕುಟುಂಬ ರಾಜಕಾರಣ-ಭ್ರಷ್ಟಾಚಾರದ ಬಗ್ಗೆ ಹೇಳುವ ಅವರ ಪಕ್ಷದಲ್ಲೇ ಇರುವ ʼವಂಶವೃಕ್ಷದ ಘೋಂಡಾರಣ್ಯ & ಭ್ರಷ್ಟಾಚಾರʼ ಕೂಪದ ಬಗ್ಗೆ ಅವರೇಕೆ ದಿವ್ಯಮೌನ ವಹಿಸುತ್ತಾರೆ. ಕರ್ನಾಟಕದಿಂದ ಹಿಡಿದು, ವಿಂಧ್ಯ ಪರ್ವತದ ಆಚೆಗೂ ಬಿಜೆಪಿಗರ ಕುಟುಂಬಗಳ ಕುಲಕಸುಬು ರಾಜಕೀಯವೇ ಆಗಿ, ಭ್ರಷ್ಟಾಚಾರವು ಅವರ ನಿತ್ಯ ಆಚಾರ ಆಗಿದೆ ಎಂದು ಆರೋಪಿಸಿದ್ದಾರೆ.
ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಆಹಾರ, ವ್ಯಾಪಾರ ಇತ್ಯಾದಿಗಳ ಮೂಲಕ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದ ಭಾರತದ ಭಾವೈಕ್ಯತೆಯ ಬುಡಕ್ಕೆ ಕೊಡಲಿ ಹಾಕಿದವರು ಯಾರು? ಪ್ರಜಾಸತ್ತೆಯ ಅಖಂಡ ರಕ್ಷಕನಾದ ಸಂವಿಧಾನಕ್ಕೇ ಅಪಚಾರವೆಸಗಿ ʼಆಪರೇಷನ್ ಕಮಲʼವೆಂಬ ಅನೈತಿಕ ರಾಜಕಾರಣ ಆರಂಭ ಮಾಡಿದ್ದು ಯಾರು? ಕರ್ನಾಟಕದಲ್ಲಿ ಎರಡು ಸಲ ಬಿಜೆಪಿ ಸರಕಾರ ಬಂದಿದ್ದು ಹೇಗೆ? ರಾಜಮಾರ್ಗದಲ್ಲಿ ಬಂತಾ? ಇಲ್ಲ, ಶಾಸಕರನ್ನು ಸಂತೆಯಲ್ಲಿ ರಾಸುಗಳಂತೆ ನಿರ್ಲಜ್ಜವಾಗಿ ಖರೀದಿಸಿದ್ದರಿಂದಲೇ ಬಂದ ʼಅಕ್ರಮ ಸರಕಾರʼವಿದು. ಪ್ರಧಾನಿಯವರು ಇದನ್ನು ನಿರಾಕರಿಸುತ್ತಾರಾ? ಮೋದಿ ಅವರು ಈ ನೀತಿಹೀನ ಸರಕಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದು ಸುಳ್ಳಾ? ಕೋಟಿ ಕೋಟಿ ಲೂಟಿ ಹೊಡೆದು ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಎಗರಿಸಿಕೊಂಡು ಹೋಗಿದ್ದು ದೇಶಕ್ಕೆ ಒಳ್ಳೆಯದಾ? ಯುವಜನರಿಗೆ ದಾರಿದೀಪವಾ? ಈ ಬಗ್ಗೆ ಮೋದಿ ಅವರ ಮನ್ ಕೀ ಬಾತ್ ಮೌನವಾಗಿದೆ! ಏಕೆ? ಎಂದು ಪ್ರಶ್ನಿಸಿದ್ದಾರೆ.
ʼಆಪರೇಷನ್ ಕಮಲವನ್ನೇ ರಾಷ್ಟ್ರೀಕರಣʼ ಮಾಡಿದ ಕಿರಾತಕ ರಾಜಕಾರಣಕ್ಕೆ ಮೌನಸಮ್ಮತಿ ತೋರಿದವರು ಮೋದಿ ಅವರಲ್ಲವೇ? ಜನಾದೇಶದಂತೆ ರಚನೆಯಾಗಿದ್ದ ಮಧ್ಯಪ್ರದೇಶದ ಸರಕಾರವನ್ನು ಕೆಡವಿದ್ದು ಇವರ ಪಕ್ಷವೇ ಅಲ್ಲವೆ?
ಒಂದೆಡೆ: ಸಂಸತ್ತು-ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ! ಇನ್ನೊಂದೆಡೆ; ಆಪರೇಷನ್ ಕಮಲದ ಮೂಲಕ ಸಂವಿಧಾನದ ಶಿರಚ್ಛೇಧ!! ಇದೆಂಥಾ ರಾಜಕಾರಣ? ಇದು ರಾಷ್ಟ್ರೀಯವಾದಿ ಪಕ್ಷದ ಸೋಗಲಾಡಿತನ.
ಮುಖ್ಯಮಂತ್ರಿ ಸ್ಥಾನವನ್ನು ಕರ್ನಾಟಕದಲ್ಲಿ ಮಾರಾಟಕ್ಕೆ ಇಟ್ಟಿದ್ದು ಯಾರು? ರೂ.2,500 ಕೋಟಿ ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ” ಎಂದು ಕೇಳಿದ ಪಾರ್ಟಿ ಬಿಜೆಪಿ. ಇದನ್ನು ಹೇಳಿದ್ದು ನಾವಲ್ಲ, ಸ್ವತಃ ಬಿಜೆಪಿ ಶಾಸಕರೇ!! ಆ ಶಾಸಕರ ಮೇಲೆ ಶಿಸ್ತುಕ್ರಮ ಇರಲಿ, ಒಂದು ನೊಟೀಸನ್ನೂ ಕೊಡಲಿಲ್ಲ. ಮೋದಿ ಅವರೂ ಸಿಎಂ ಕರ್ಚಿ ಮಾರಾಟದ ಬಗ್ಗೆ ಮಾತನಾಡಲಿಲ್ಲ. ಈ ಘನಘೋರ ಆರೋಪದ ಬಗ್ಗೆಯೂ ಅವರದ್ದು ಮುಂದುವರಿದ ಮೌನ! ಅಲ್ಲಿಗೆ ಶಾಸಕರ ಹೇಳಿಕೆ ಸತ್ಯ ಎಂದಾಯಿತಲ್ಲ. ಪಿಎಸ್ʼಐ ಹುದ್ದೆಗಳಂತೆ ಸಿಎಂ ಪದವಿಯನ್ನೂ ಮಾರಿಕೊಳ್ಳುವುದು ದೇಶಕ್ಕೆ ಸೌಭಾಗ್ಯವಾ? ಯುವಕರಿಗೆ ಆದರ್ಶವಾ? ಎಂದು ಪ್ರಶ್ನಿಸಿದ್ದಾರೆ.
ಕುಟುಂಬ ರಾಜಕಾರಣದ ನೆಪವೊಡ್ಡಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ತಂತ್ರ ಫಲಿಸದು. ಭಾರತವೆಂದರೆ; ಬಿಜೆಪಿಯಷ್ಟೇ ಅಲ್ಲ, 140 ಕೋಟಿಗೂ ಹೆಚ್ಚು ಭಾರತೀಯರು ಸೇರಿದರೆ ಮಾತ್ರ ಭಾರತ. ಪ್ರಧಾನಿಗಳು ಈ ಆಶಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.