ಮನೆ ಕಾನೂನು ಪೂಜಾ ಹಕ್ಕು ಕೋರಿದ್ದ ಹಿಂದೂ ಪಕ್ಷಕಾರರ ದಾವೆ ವಿಚಾರಣಾರ್ಹ ಎಂದ ವಾರಾಣಸಿ ನ್ಯಾಯಾಲಯ

ಪೂಜಾ ಹಕ್ಕು ಕೋರಿದ್ದ ಹಿಂದೂ ಪಕ್ಷಕಾರರ ದಾವೆ ವಿಚಾರಣಾರ್ಹ ಎಂದ ವಾರಾಣಸಿ ನ್ಯಾಯಾಲಯ

0

ಜ್ಞಾನವಾಪಿ ಮಸೀದಿಯೊಳಗೆ ಪೂಜಾ ಹಕ್ಕು ಕೋರಿ ಹಿಂದೂ ಪಕ್ಷಕಾರರು ಹೂಡಿರುವ ದಾವೆ ವಿಚಾರಣಾರ್ಹ ಎಂದು ಎಂದು ವಾರಣಾಸಿ ನ್ಯಾಯಾಲಯ ಸೋಮವಾರ ಹೇಳಿದೆ.

ಸಿವಿಲ್ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಆದೇಶ VIIರ ನಿಯಮ 11ರ ಅಡಿಯಲ್ಲಿ ದಾವೆಯ ವಿಚಾರಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರ, ಅಂಜುಮನ್ ಇಂತೇಜಾಮಿಯಾ ಮಸೀದಿಯ ಆಡಳಿತ ಸಮಿತಿ ಸಲ್ಲಿಸಿದ್ದ ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಡಾ. ಕೆ ವಿಶ್ವೇಶ್‌ ವಜಾಗೊಳಿಸಿದರು.

ಜ್ಞಾನವಾಪಿ ಮಸೀದಿ ಹಿಂದೂ ದೇವಾಲಯವಾಗಿದ್ದು ಅಲ್ಲಿ ಇನ್ನೂ ಹಿಂದೂ ದೇವತೆಗಳ ವಿಗ್ರಹಗಳಿವೆ. ಅದರ ಆವರಣದೊಳಗೆ ಪೂಜೆ ಸಲ್ಲಿಸುವ ಹಕ್ಕು ತಮಗೆ ಇದೆ ಎಂದು ಹಿಂದೂ ಭಕ್ತರು ಈ ಹಿಂದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್‌ ನ್ಯಾಯಾಲಯವು ವಕೀಲ ಕಮಿಷನರ್‌ ಅವರನ್ನು ನೇಮಿಸಿ ಮಸೀದಿ ಸಮೀಕ್ಷೆಗೆ ಆದೇಶಿಸಿತ್ತು. ನಂತರ ಅವರು ವಿಡಿಯೊ ಸರ್ವೆ ನಡೆಸಿ ಸಿವಿಲ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ದೇಶದ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ಅಂದರೆ 1947ರ ಆಗಸ್ಟ್‌ 15ರಲ್ಲಿ ಇದ್ದಂತೆ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆ ಹೇಳುತ್ತಿದ್ದು ಅದರಂತೆ ಮುಸ್ಲಿಂ ಪಕ್ಷಕಾರರು ಸಿಪಿಸಿ ಆದೇಶ VII ನಿಯಮ 11ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದವು.

ಆದರೆ ಪ್ರಸ್ತುತ ಪ್ರಕರಣದಲ್ಲಿರುವ ಸಮಸ್ಯೆಯ ಸೂಕ್ಷ್ಮತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಸಿವಿಲ್‌ ನ್ಯಾಯಾಲಯದ ಮುಂದಿದ್ದ ಮೊಕದ್ದಮೆಯನ್ನು ಕಳೆದ ಮೇ 20ರಂದು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಧಾರ್ಮಿಕ ಕಟ್ಟಡದ ಸ್ವರೂಪದ ವಿಚಾರವು ವ್ಯಾಜ್ಯದ ಕೇಂದ್ರದಲ್ಲಿರುವುದರಿಂದ ಸಮೀಕ್ಷಾ ವರದಿಯನ್ನು ಪರಿಗಣಿಸದೆ ದಾವೆಯ ವಿಚಾರಣಾರ್ಹತೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹಿಂದೂ ಪಕ್ಷಕಾರರು ಜಿಲ್ಲಾ ನ್ಯಾಯಾಲಯದ ಮುಂದೆ ವಾದಿಸಿದ್ದರು.

ನಂತರ ಜಿಲ್ಲಾ ನ್ಯಾಯಾಲಯ ವಕೀಲ ಕಮಿಷನರ್ ಸಲ್ಲಿಸಿದ್ದ ಸಮೀಕ್ಷಾ ವರದಿಗೆ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ಕಕ್ಷಿದಾರರಿಗೆ ತಿಳಿಸಿತ್ತು. ಆಗಸ್ಟ್ 24 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಶ್ವೇಶ ಅವರು ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ಹಿಂದಿನ ಲೇಖನಪರಶುರಾಮನು ಅಸ್ತ್ರಗಳನ್ನು ಪಡೆದ ಕಥೆ
ಮುಂದಿನ ಲೇಖನಶ್ವಾಸಕೋಶ ಆರೋಗ್ಯದಿಂದಿರಲು ಈ ಆಯುರ್ವೇದ ಮೂಲಿಕೆಗಳು ಉತ್ತಮ