ಮೈಸೂರು: ಮನೆಯ ಬಾಗಿಲಿನ ಇನ್ನರ್ ಲಾಕ್ ಮುರಿದು 7 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ್ 1ನೇ ಹಂತದಲ್ಲಿ ನಡೆದಿದೆ.
ಇಲಿನ ನಿವಾಸಿ, ವರ್ತಕ ಆರ್.ಎ. ತೇಜಸ್ ಪಟೇಲ್ ಹಣ ಮತ್ತು ಚಿನ್ನಾಭರಣ ಕಳೆದು ಕೊಂಡವರಾಗಿದ್ದು, ಇವರು ಬೆಂಗಳೂರಿನಲ್ಲಿ ವಾಸವಿದ್ದು, ಹೆಬ್ಬಾಳ್ ನ ಸ್ವಂತ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಇವರ ಅಕ್ಕ ದಿವ್ಯಾ ಅವರು ಹುಣಸೂರು ತಾಲೂಕು ಗೆರಸನ ಹಳ್ಳಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದು, ಅಲ್ಲೇ ವಾಸವಿದ್ದರು. ಆಗಿಂದಾಗ್ಗೆ ಹೆಬ್ಬಾಳ್ ಮನೆಗೆ ಬಂದು –ಹೋಗುತ್ತಿದ್ದರು. ಈ ಕುಟುಂಬದವರು ಹಣ ಮತ್ತು ಚಿನ್ನಾಭರಣವನ್ನು ಈ ಮನೆಯಲ್ಲೇ ಇಟ್ಟಿದ್ದರು.
ಕಳೆದ ಜುಲೈ 10 ರಂದು ತೇಜಸ್ ಪಟೇಲ್, ಅವರ ತಾಯಿ ಸುಶೀಲ ಮತ್ತು ಅಕ್ಕ ದಿವ್ಯಾ ಅವರು ಹೆಬ್ಬಾಳ್ ಮನೆಗೆ ಬಂದು- ಹೋಗಿದ್ದರು. ಜುಲೈ 18 ರಂದು ಇವರ ಪಕ್ಕದ ಮನೆಯಲ್ಲಿರುವ ಗೀತಾ ಎಂಬುವವರು ಮನೆ ಬಾಗಿಲು ತೆರೆದಿರುವುದಾಗಿ ಮೊಬೈಲ್ ಮೂಲಕ ತಿಳಿಸಿದ್ದಾರೆ.
ತೇಜಸ್ ಪಟೇಲ್ ಆಗಮಿಸಿ, ಪರಿಶೀಲಿಸಿದಾಗ ಖದೀಮರು ಮನೆಯ ಇನ್ನರ್ ಲಾಕ್ ಮುರಿದು, ಬೀರುವಿನ ಬಾಗಿಲು ಮೀಟಿ ಅಲ್ಲಿದ್ದ 7 ಲಕ್ಷ ರೂ. ನಗದು ಮತ್ತು 56 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಹೆಬ್ಬಾಳ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.