ಮನೆ ಸುದ್ದಿ ಜಾಲ ಮಸೀದಿಯಲ್ಲಿ ಸಿಕ್ಕ ಸಮಾನತೆ ನನ್ನ ಜೀವನ ಬದಲಿಸಿತು: ನಟ ಜೈ ಸಂಪತ್ ಹೇಳಿಕೆ

ಮಸೀದಿಯಲ್ಲಿ ಸಿಕ್ಕ ಸಮಾನತೆ ನನ್ನ ಜೀವನ ಬದಲಿಸಿತು: ನಟ ಜೈ ಸಂಪತ್ ಹೇಳಿಕೆ

0

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಜೈ ಸಂಪತ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವ ಕುರಿತು ನೀಡಿದ ಹೇಳಿಕೆ ಇದೀಗ ಸಿನಿ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಟ ವಿಜಯ್ ಜೊತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಜೈ, ತಮ್ಮ ಧರ್ಮಾಂತರದ ಹಿಂದೆ ಇರುವ ಕಾರಣಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ತಮಿಳು ನಟ ಜೈ ಅಲಿಯಾಸ್ ಜೈ ಸಂಪತ್ ಇತ್ತೀಚೆಗೆ ‘ಗಲಾಟಾ ಪ್ಲಸ್’ ಡಿಜಿಟಲ್ ವೇದಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಕೆಲವು ದೇವಸ್ಥಾನಗಳಲ್ಲಿ ತಮಗೆ ಎದುರಾದ ಅನುಭವಗಳು ತಮ್ಮ ಜೀವನದ ದಿಕ್ಕನ್ನು ಬದಲಿಸಿತು ಎಂದು ಹೇಳಿದ್ದಾರೆ. “ನಾನು ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದೆ. ಶಬರಿಮಲೆಗೂ ಹೋಗಿದ್ದೇನೆ. ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನೂ ಪಾಲಿಸಿದ್ದೇನೆ. ಎಲ್ಲ ದೇವರುಗಳೂ ಒಂದೇ ಎಂಬ ನಂಬಿಕೆ ನನ್ನಲ್ಲಿತ್ತು” ಎಂದು ಅವರು ತಿಳಿಸಿದ್ದಾರೆ.

ಆದರೆ ಕೆಲವು ದೇವಸ್ಥಾನಗಳಲ್ಲಿ ತಮಗೆ ನಿರೀಕ್ಷಿಸದ ರೀತಿಯ ಅವಮಾನಗಳು ಎದುರಾದವು ಎಂದು ನಟ ಜೈ ಹೇಳಿದ್ದಾರೆ. “ಕೆಲವು ಘಟನೆಗಳು ನನಗೆ ತುಂಬಾ ಬೇಸರ ಉಂಟುಮಾಡಿದವು. ಇಂತಹ ಅನುಭವಗಳು ಮರುಕಳಿಸುತ್ತಿದ್ದಾಗ ನಾನು ಒಂದು ದಿನ ಮಸೀದಿಗೆ ಭೇಟಿ ನೀಡಿದೆ” ಎಂದು ಅವರು ವಿವರಿಸಿದ್ದಾರೆ.

ಮಸೀದಿಯಲ್ಲಿ ತಮಗೆ ದೊರೆತ ಅನುಭವ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು ಎಂದು ನಟ ಜೈ ಹೇಳಿದ್ದಾರೆ. “ನಾನು ಮೊದಲ ಬಾರಿಗೆ ಮಸೀದಿಗೆ ಹೋದಾಗ ಅಲ್ಲಿ ಇದ್ದ ಎಲ್ಲರಿಗೂ ನಾನು ಸಿನಿಮಾ ನಟ ಎಂಬುದು ಗೊತ್ತಿತ್ತು. ಆದರೂ ಮಸೀದಿಯ ಒಳಗೆ ಯಾರೂ ನನ್ನ ಜೊತೆ ಮಾತನಾಡಲಿಲ್ಲ. ಯಾರೂ ಫೋಟೋ ಅಥವಾ ಸೆಲ್ಫಿಗಾಗಿ ಬಂದಿಲ್ಲ. ಪ್ರಾರ್ಥನೆ ಮುಗಿದು ಹೊರಗೆ ಬಂದ ಬಳಿಕ ಮಾತ್ರ ಎಲ್ಲರೂ ಮಾತನಾಡಿದರು” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, “ಇಸ್ಲಾಂ ಧರ್ಮದಲ್ಲಿ ಮಸೀದಿಯ ಒಳಗೆ ಎಲ್ಲರೂ ಸಮಾನರು. ಅಲ್ಲಿ ಯಾರಿಗೂ ವಿಶೇಷ ಸ್ಥಾನಮಾನ ಇರುವುದಿಲ್ಲ. ಅಲ್ಲಾಹ್ ಮುಂದೆ ಎಲ್ಲರೂ ಒಂದೇ ಎಂಬ ಭಾವನೆ ನನಗೆ ತುಂಬಾ ಸ್ಪರ್ಶಿಸಿತು. ಆ ಅನುಭವ ನನ್ನ ಆಲೋಚನೆ ಹಾಗೂ ಸ್ವಭಾವವನ್ನು ಸಂಪೂರ್ಣವಾಗಿ ಬದಲಿಸಿತು” ಎಂದು ನಟ ಜೈ ಹೇಳಿದ್ದಾರೆ.

ನಟ ಜೈ 2011ರಿಂದಲೇ ಇಸ್ಲಾಂ ಧರ್ಮದ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಾ ಬಂದಿರುವ ಅವರು, ಮುಂದಿನ ದಿನಗಳಲ್ಲಿ ತಮ್ಮ ಹೆಸರನ್ನು ಕಾನೂನಾತ್ಮಕವಾಗಿ ಬದಲಾಯಿಸುವ ಯೋಚನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ. “ನಾನು ನನ್ನ ಹೆಸರನ್ನು ಅಜೀಜ್ ಜೈ ಎಂದು ಬದಲಾಯಿಸಲು ಯೋಚಿಸುತ್ತಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜೈ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿವೆ. ಕೆಲವರು ನಟನ ನಿರ್ಧಾರವನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಇದು ಪ್ರಚಾರಕ್ಕಾಗಿ ಮಾಡಿರುವ ಹೇಳಿಕೆ ಎಂದು ಟೀಕಿಸುತ್ತಿದ್ದಾರೆ.

ನಟ ಜೈ ಹಾಗೂ ನಟ ವಿಜಯ್ ಒಟ್ಟಿಗೆ ಅಭಿನಯಿಸಿದ್ದ ‘ಭಗವತಿ’ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಆ ಸಿನಿಮಾದಲ್ಲಿ ಜೈ, ವಿಜಯ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಜೈ ಅವರ ಧರ್ಮಾಂತರ ವಿಚಾರ ಮತ್ತೆ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.