ಕೋಲಾರ: ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಸುದ್ದಿ ತಿಳಿದು ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ, ಸುದ್ದಿ ತಿಳಿದ ಇದರಿಂದ ಪ್ರಿಯಕರ ಮನನೊಂದು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.
ಮೃತರನ್ನು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮದ ಕೀರ್ತಿ(20), ಹಾಗೂ ಆತ್ಮಹತ್ಯೆ ಮಾಡಿಕೊಂಡವನನ್ನು ಗಂಗಾಧರ್(24) ಎಂದು ಗುರುತಿಸಲಾಗಿದೆ. ಕೀರ್ತಿ ಪದವಿ ವ್ಯಾಸಂಗ ಮಾಡುತ್ತಿದ್ದಳು ಗಂಗಾಧರ್ ತಮಟೆ ಕಲಾವಿದನಾಗಿದ್ದು ಗಾರೆ ಕೆಲಸ ಮಾಡುತ್ತಿದ್ದ. ಕೀರ್ತಿ ತಂದೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ.
ಮೃತ ಗಂಗಾಧರ್ ಹಾಗೂ ಕೀರ್ತಿ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಗಂಗಾಧರ್ ತಮ್ಮ ಪ್ರೀತಿಯ ವಿಚಾರವನ್ನು ಕೀರ್ತಿಯ ತಂದೆ ಕೃಷ್ಣಮೂರ್ತಿ ಬಳಿ ಹೇಳಿದ್ದಾನೆ. ಅಲ್ಲದೆ ಮದುವೆ ಮಾಡಿಕೊಡುವಂತೆಯೂ ಕೇಳಿಕೊಂಡಿದ್ದಾನೆ. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿದೆ. ಇಬ್ಬರ ಮದುವೆಗೆ ಕೀರ್ತಿಯ ತಂದೆ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದುಬಂದಿದೆ.
ಗಂಗಾಧರ್ನನ್ನು ಮರೆತುಬಿಡುವಂತೆ ಪೋಷಕರು ಕೀರ್ತಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದೇ ಇಬ್ಬರೂ ಪ್ರೀತಿಸುತ್ತಿದ್ದರು. ಈ ಸಂಬಂಧ ಮಂಗಳವಾರ ಬೆಳಗ್ಗೆ ಮತ್ತೆ ಕೀರ್ತಿ ಮತ್ತು ತಂದೆ ಕೃಷ್ಣಮೂರ್ತಿ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಕೃಷ್ಣಮೂರ್ತಿ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ.
ಈ ಸುದ್ದಿ ಹತ್ತಿರದಲ್ಲೇ ಇದ್ದ ಗಂಗಾಧರ್ ಮತ್ತು ಅವರ ಕುಟುಂಬಕ್ಕೆ ತಲುಪಿದ್ದು. ಯಾವುದೇ ಸಮಸ್ಯೆಯಾಗದಂತೆ ಗಂಗಾಧರ್ ಅಣ್ಣ ಶ್ರೀನಿವಾಸ್ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ರೈಲ್ವೇ ಹಳಿ ಬಳಿ ಹೋಗುತ್ತಿದ್ದಾಗ ಗಂಗಾಧರ್ ನೀರು ಕುಡಿಯುತ್ತೇನೆ ಎಂದು ಹೇಳಿ ವಾಹನ ನಿಲ್ಲಿಸುವಂತೆ ಕೇಳಿದ್ದಾನೆ.