ಮನೆ ಸುದ್ದಿ ಜಾಲ ಸರ್ಕಾರದಿಂದ ಕಾರ್ಮಿಕರಿಗೆ ನೀಡಿದ್ದ ಉಚಿತ ಬಸ್ ಪಾಸ್ ಸೌಲಭ್ಯ ರದ್ದು

ಸರ್ಕಾರದಿಂದ ಕಾರ್ಮಿಕರಿಗೆ ನೀಡಿದ್ದ ಉಚಿತ ಬಸ್ ಪಾಸ್ ಸೌಲಭ್ಯ ರದ್ದು

0

ಸರ್ಕಾರದಿಂದ ಕಾರ್ಮಿಕರಿಗೆ ನೀಡಿದ್ದ ಉಚಿತ ಬಸ್ ಪಾಸ್ ಸೌಲಭ್ಯವನ್ನು ರದ್ದುಗೊಳಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಕಾರ್ಮಿಕರಿಗೆ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಗೆ ಚಾಲನೆ ನೀಡಿತ್ತು. ಮೊದಲು ಬಿಎಂಟಿಸಿಯಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಿತ್ತು. ಇದೀಗ ಹೊಸ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ, ಹಿಂದಿನ ಬಿಜೆಪಿ ಸರ್ಕಾರದ ಯೋಜನೆ ಅರ್ಧಕ್ಕೆ ನಿಂತಿದೆ.

Join Our Whatsapp Group

ಹುಬ್ಬಳ್ಳಿ: ಕಾರ್ಮಿಕರ ವರ್ಗದ ಸುರಕ್ಷಿತ ಓಡಾಟಕ್ಕೆ ಘೋಷಿಸಿದ್ದ ಉಚಿತ ಬಸ್ ಪಾಸ್ ಯೋಜನೆಯನ್ನು ಕಳೆದ 2 ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಕೇವಲ ಆರು ತಿಂಗಳಲ್ಲಿ ಈ ಯೋಜನೆಗೆ ತಿಲಾಂಜಲಿ ಇರಿಸಿದ್ದು, ಇದು ಹಿಂದಿನ ಸರ್ಕಾರದ ಚುನಾವಣಾ ಗಿಮಿಕ್ ಎನ್ನುವುದು ಸಾಬೀತಾದಂತಾಗಿದ್ದು, ಹೊಸ ಸರ್ಕಾರದ ನಿಲುವು ಕುರಿತು ಕಾರ್ಮಿಕರು ಕಾಯುತ್ತಿದ್ದಾರೆ.

ಹೊಸ ಸರ್ಕಾರ ಗ್ಯಾರಂಟಿಗಳ ಜತೆಗೆ ಇದನ್ನು ಮುನ್ನಡೆಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಸಾರಿಗೆಗಳಲ್ಲಿ ಕಟ್ಟಡ ಕಾರ್ಮಿಕರ ಸಂಚಾರದ ವೇಳೆ ಹಲವು ಅವಘಡಗಳು ಸಂಭವಿಸಿದ್ದವು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಗೆ ಚಾಲನೆ ನೀಡಿತ್ತು. ಆರಂಭದಲ್ಲಿ ಬಿಎಂಟಿಸಿಯಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಿತ್ತು. ಆದರೆ ಇದೀಗ ಯೋಜನೆಗೆ ಅಂತಿಮ ಮೊಳೆ ಹೊಡೆದಿದ್ದು, ಎರಡು ತಿಂಗಳಿನಿಂದ ಯಾವುದೇ ಪಾಸ್ಗಳನ್ನು ನೀಡುತ್ತಿಲ್ಲ. ಕಳೆದ ಮಾರ್ಚ್ 31ಕ್ಕೆ ಪಾಸ್ ಅವಧಿ ಮುಕ್ತಾಯಗೊಂಡಿದ್ದು, ನವೀಕರಣ ಮಾಡದಂತೆ ಸೂಚನೆ ನೀಡಲಾಗಿದೆ.

ಒಂದು ಲಕ್ಷ ಪಾಸ್

ಆರಂಭದಲ್ಲಿ ಒಂದು ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಿ ನಂತರ ಹಂತ ಹಂತವಾಗಿ ಇದನ್ನು ವಿಸ್ತರಿಸುವ ಭರವಸೆ ವ್ಯಕ್ತವಾಗಿತ್ತು. ಕಟ್ಟಡ ಕಾಮಗಾರಿಗಾಗಿ ಕಾರ್ಮಿಕರು ವಲಸೆ ಹೋಗುವುದು ಹೆಚ್ಚು ಎನ್ನುವ ಕಾರಣ ನೀಡಿ, ಪ್ರತಿ 3 ತಿಂಗಳಿಗೊಮ್ಮೆ ನವೀಕರಣದ ನಿಯಮ ರೂಪಿಸಲಾಗಿತ್ತು. ಹೀಗಾಗಿ ಮೊದಲ ಬಾರಿಗೆ 2022 ಸೆಪ್ಟೆಂಬರ್ ಹಾಗೂ ಡಿಸೆಂಬರ್ ಹೀಗೆ ಎರಡು ಹಂತದಲ್ಲಿ ಪಾಸ್ ನೀಡಲಾಯಿತು.

ಈ ಯೋಜನೆ ಮುಂದುವರಿಯಲಿದೆ ಎಂಬ ಕಾರ್ಮಿಕರ ನಿರೀಕ್ಷೆ ಸುಳ್ಳಾಗಿದ್ದು, ಮಾರ್ಚ್ 31ರ ನಂತರ ಪಾಸ್ ವಿತರಿಸದಂತೆ ಹಾಗೂ ಅಂತಹ ಪಾಸ್ಗಳಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಸಾರಿಗೆ ಸಂಸ್ಥೆ ಸೂಚನೆ ನೀಡಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಾಕಷ್ಟು ಹಣವಿದ್ದು, ಇದನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಮೂರು ತಿಂಗಳಿಗೆ 42 ಕೋಟಿ ರೂ.ನಂತೆ ವರ್ಷಕ್ಕೆ 168 ಕೋಟಿ ರೂ. ತಗುಲುತ್ತದೆ. ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಆದರೆ ಕೇವಲ 6 ತಿಂಗಳಲ್ಲಿ ಇದಕ್ಕೆ ಅಂತಿಮ ಮೊಳೆ ಹೊಡೆಯಲಾಗಿದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ತಾನು ಹೊರಡಿಸಿರುವ ಐದು ಗ್ಯಾರಂಟಿ ಮೂಲಕ ಉಚಿತ ಬಸ್ ಪಾಸ್ ಮುಂದುವರಿಸಲಿ ಎಂಬುದು ಕಾರ್ಮಿಕರ ಒತ್ತಾಸೆಯಾಗಿದೆ.

ಕಾರ್ಮಿಕ ಕಾರ್ಡ್ ಪರಿಶೀಲನೆ ಅಗತ್ಯ

ಸರ್ಕಾರಿ ಸೇವೆಗಳು, ಪರಿಹಾರ, ಕಿಟ್ ದೊರೆಯುತ್ತವೆ ಎನ್ನುವ ಕಾರಣಕ್ಕೆ ಲಕ್ಷಾಂತರ ನಕಲಿ ಕಾರ್ಮಿಕರು ಸೃಷ್ಟಿಯಾಗಿರುವ ಬಗ್ಗೆ ನೈಜ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವುದೇ ಸೇವೆ ನೀಡುವ ಮುನ್ನ ಕಾರ್ಡ್ಗಳ ನೈಜತೆ, ಅರ್ಹ ಫಲಾನುಭವಿ ಗುರುತಿಸುವ ಕಾರ್ಯ ಸರ್ಕಾರದಿಂದ ಆಗಬೇಕಾಗಿದೆ. ಕೋವಿಡ್ ನಂತರದಲ್ಲಿ ಅರ್ಹರಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ಪಡೆದುಕೊಂಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಸಾವಿರಗಟ್ಟಲೆಯಿದ್ದ ಕಾರ್ಡ್ಗಳ ಸಂಖ್ಯೆ ಲಕ್ಷ ದಾಟಿವೆ. ನಕಲಿ ಫಲಾನುಭವಿಗಳೇ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಿದೆ ಎನ್ನುವುದು ಅರ್ಹ ಫಲಾನುಭವಿಗಳ ಅಳಲಾಗಿದ್ದು, ಪಾಸ್ ವಿತರಿಸುವ ಮುನ್ನ ಕಾರ್ಡ್ ಪರಿಶೀಲನೆ ಅಗತ್ಯವಿದೆ.

ಹಿಂದಿನ ಲೇಖನವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ತಡೆಯಿರಿ:ಡಿಜಿ ಐಜಿಪಿ ಅಲೋಕ್ ಮೋಹನ್
ಮುಂದಿನ ಲೇಖನಗೃಹಲಕ್ಷ್ಮೀ ಯೋಜನೆಗಾಗಿ ಇತರ ಪಿಂಚಣಿಗಳನ್ನು ಕಡಿತ ಇಲ್ಲ: ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟನೆ