ಮನೆ ಕಾನೂನು ಸಕ್ಷಮ ಪ್ರಾಧಿಕಾರ ಅನುಮತಿ ಇಲ್ಲದೇ ಪೈಲಟ್ ವಿರುದ್ಧ ದಾಖಲಾಗಿದ್ದ ದೂರು ರದ್ದುಪಡಿಸಿದ ಹೈಕೋರ್ಟ್

ಸಕ್ಷಮ ಪ್ರಾಧಿಕಾರ ಅನುಮತಿ ಇಲ್ಲದೇ ಪೈಲಟ್ ವಿರುದ್ಧ ದಾಖಲಾಗಿದ್ದ ದೂರು ರದ್ದುಪಡಿಸಿದ ಹೈಕೋರ್ಟ್

0

ಬೆಂಗಳೂರು: ಜಕ್ಕೂರು ಏರೋ ಡ್ರಮ್‌ನಲ್ಲಿ ವಿಮಾನವನ್ನು ಎಡಕ್ಕೆ ತಿರುಗಿಸಿದ್ದ ಆರೋಪದಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಪೈಲೆಟ್‌ ಒಬ್ಬರ ವಿರುದ್ಧ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಪೈಲಟ್ ಆಕಾಶ್ ಜೈಸ್ವಾಲ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

Join Our Whatsapp Group

ಅಲ್ಲದೆ, ವಿಮಾನ ಕಾಯಿದೆ ಸೆಕ್ಷನ್ 11ಎ ಅಡಿಯಲ್ಲಿ ಪೈಲಟ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ್ದ ಕ್ರಮವನ್ನು ನ್ಯಾಯಪೀಠ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ನಾಗರಿಕ ವಿಮಾನಯಾನ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಹಾಗೂ ವಿಮಾನ ಅಪಘಾತಗಳ ತನಿಖಾ ಬ್ಯೂರೋಗಳು ಮಹಾನಿರ್ದೇಶಕರುಗಳು ಲಿಖಿತವಾಗಿ ನೀಡಿದ ದೂರಿನ ಮೇರೆಗೆ ಅಥವಾ ಪೂರ್ವಾನುಮತಿಯೊಂದಿಗೆ ವಿಚಾರಣಾ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಪರಿಗಣಿಸಬಾರದು ಎಂಬುದಾಗಿ ವಿಮಾನ ಕಾಯ್ದೆಯ ಸೆಕ್ಷನ್ 12ರಲ್ಲಿ ತಿಳಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಸಿಆರ್‌ಪಿಸಿ ಅಡಿ ದೂರು ದಾಖಲಿಸುವುದು ಎಂದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಿದಂತೆ. ಹೀಗಾಗಿ ದೂರಿಗೆ ಸಂಬಂಧಿಸಿದಂತೆ ಪೂರ್ವಾನುಮತಿ ಇಲ್ಲ. ಅರ್ಜಿದಾರ ಪೈಲಟ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಈ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೆಗೆದುಕೊಂಡಿರುವ ಕಾಗ್ನಿಜೆನ್ಸ್‌ನ್ನು ರದ್ದುಪಡಿಸಲಾಗುತ್ತಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಪ್ರಕರಣ ದಾಖಲಿಸಿರುವುದು ಕಾನೂನು ವಿರುದ್ಧವಾಗಲಿದೆ. ಈ ಪ್ರಕರಣದ ವಿಚಾರಣೆ ಮುಂದುವರೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಜಕ್ಕೂರು ಏರೋಡ್ರಮ್‌ನಲ್ಲಿ 2020ರಲ್ಲಿ ವಿಮಾನ ಹಾರಿಸುವ ಸಂದರ್ಭದಲ್ಲಿ ಟೇಕ್ ಆಫ್ ಆಗಬೇಕಾದರೆ ಅರ್ಜಿದಾರ ಪೈಲೆಟ್ ನಿರ್ಲಕ್ಷ್ಯದಿಂದಾಗಿ ವಿಮಾನ ಎಡಕ್ಕೆ ತಿರುಗಿ ಅಪಘಾತ ಸಂಭವಿಸಿತ್ತು. ಆದರೆ, ಯಾವುದೇ ರೀತಿಯ ಅಪಾಯ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿರಲಿಲ್ಲ. ಈ ಸಂಬಂಧ ಜಕ್ಕೂರು ಏರೋಡ್ರಮ್‌ನ ಕಾರ್ಯದರ್ಶಿಯಾಗಿದ್ದ ಬಸವರೆಡ್ಡೆಪ್ಪ ರೋನಾಡ್ ಎಂಬುವರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಪೈಲೆಟ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿಮಾನ ಕಾಯಿದೆ ಸೆಕ್ಷನ್ 12ಬಿ ಯಲ್ಲಿ ತಿಳಿಸಿರುವುಂತೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದಿದ್ದಲ್ಲಿ ಯಾವುದೇ ನ್ಯಾಯಾಲಯ ಪೈಲಟ್​ಗಳ ವಿರುದ್ಧ ಪ್ರಾಸಿಕ್ಯೂಷನ್‌ನನ್ನು ಪರಿಗಣಿಸುವುದಕ್ಕೆ ಅವಕಾಶವಿರುವುದಿಲ್ಲ. ಜತೆಗೆ, ಅರ್ಜಿದಾರರ ವಿರುದ್ಧ ವಿಮಾನಯಾನ ಇಲಾಖೆ ನಡೆಸಿದ್ದ ಆಂತರಿಕ ವಿಚಾರಣೆಯಲ್ಲಿ ದೋಷಮುಕ್ತರಾಗಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ವಿಮಾನ ಅಪಘಾತ ಎಂಬ ಅಂಶ ಗೊತ್ತಾದ ಬಳಿಕ ಪ್ರಕರಣವನ್ನು ದಾಖಲಿಸಲಾಗಿದೆ. ಹೀಗಾಗಿ ಪ್ರಕರಣ ವಿಚಾರಣಾ ನ್ಯಾಯಾಲಯಲ್ಲಿ ವಿಚಾರಣಾ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಆರೋಪಿತರ (ಅರ್ಜಿದಾರರ) ವಿರುದ್ಧ ವಿಚಾರಣೆ ಪೂರ್ಣಗೊಂಡು ಶುದ್ಧಹಸ್ತರಾಗಿ ಬರಬೇಕಾಗಿದೆ ಎಂದು ಪೀಠಕ್ಕೆ ವಿವರಿಸಿದರು.