ಮಂಡ್ಯ: ಸಣ್ಣಪುಟ್ಟ ವಸ್ತುಗಳಿಂದ ಹಿಡಿದು ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ,ಆದರೆ ಇಲ್ಲೊಬ್ಬರು ಮನೆ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಪ್ರಕರಣ ಮಂಡ್ಯದಲ್ಲಿ ನಡೆದಿದೆ.
ತಾಲ್ಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ಮಾವನ ಮನೆ ಕಳವಾಗಿದೆ ಎಂದು ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ
ಬೂದನೂರು ಗ್ರಾಮ ಪಂಚಾಯತಿ ಖಾತೆ ಸಂಖ್ಯೆ 291/288 ರಲ್ಲಿ ನಮ್ಮ ಸೋದರ ಮಾವ ಬಿ.ಟಿ.
ಸಿದ್ದರಾಮಯ್ಯ ಬಿನ್ ತಮ್ಮೇಗೌಡ ಅವರಿಗೆ ಮನೆ ಇತ್ತು.ಸದರಿ ಆಸ್ತಿ 10*25, 32*12 ಮನೆ ಸೇರಿದಂತೆ ಆಸ್ತಿಯಿತ್ತು.ಬುಧವಾರ ಮಧ್ಯಾಹ್ನ ಅವರ ಮನೆಗೆ ಹೋಗಿ ನೋಡಿದಾಗ ಮನೆ ಇರಲಿಲ್ಲ.ಸದರಿ ವಿಚಾರವಾಗಿ ಬೂದನೂರು ಗ್ರಾಮ ಪಂಚಾಯತಿಗೆ ತೆರಳಿ ವಿಚಾರಿಸಿ ದಾಖಲೆ ಕೇಳಿದಾಗ ಅದರಲ್ಲಿ ಮನೆ ಇದೆ ಎಂದು ದಾಖಲೆ ನೀಡಿರುತ್ತಾರೆ.ಮನೆ ಇಲ್ಲದ ಬಗ್ಗೆ ವಾಸ್ತವವಾಗಿ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಗೆ ಮನೆ ತೆರವುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.ಈ ಮನೆಯನ್ನು ಮಕ್ಕಳಿಲ್ಲದೆ ಮಾವ ನನಗೆ ಉಡುಗೊರೆ ಕೊಡುತ್ತೇನೆ ಎಂದಿದ್ದರು.ಇದೀಗ ಮಾವ ಅಮೆರಿಕಾಕ್ಕೆ ಹೋಗಿ ನೆಲಸಿದ್ದಾರೆ. ಅವರು ದೂರವಾಣಿ ಸಂಪರ್ಕ ಸಿಗುತ್ತಿಲ್ಲ.
ಗ್ರಾಮ ಪಂಚಾಯತಿ ಮನೆ ತೆರವುಗೊಳಿಸಿದ್ದರೂ ದಾಖಲೆ ಇಟ್ಟಿದ್ದಾರೆ.ಆ ಕುರಿತು ಮಾಹಿತಿ ಕೇಳಿದಾಗ ಇಲ್ಲ ಎಂದು ಮೌಖಿಕ ಮಾಹಿತಿ ನೀಡಿದ್ದಾರೆ.
ಸದರಿ ಮನೆಯನ್ನು ಏನು ಮಾಡಿದ್ದಾರೆ ಎಂಬ ಕುರಿತು ಅಸ್ಪಷ್ಟ ಉತ್ತರ ನೀಡುತ್ತಿರುವ ಹಿನ್ನಲೆಯಲ್ಲಿ ಮನೆ ಕಳವು ಮಾಡಿರುವ ಗುಮಾನಿಯಿದೆ. ಈ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಪಿಡಿಒ/ಆಡಳಿತ ಮಂಡಳಿಯೇ ಈ ಕೃತ್ಯಕ್ಕೆ ಕಾರಣವಾಗಿದೆ. ಮನೆ ಕಳವು ಮಾಡಿರುವ ಬಗ್ಗೆ ಅಥವಾ ಏನು ಕ್ರಮ ವಹಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕಾಗಿ ಮನವಿ ಮಾಡಿದರು.
ಅದೇ ರೀತಿ ಬೂದನೂರು ಗ್ರಾಮದಲ್ಲಿ ಹಲವು ಮನೆಗಳ ತೆರವಾಗಿದ್ದರೂ ಗ್ರಾಮ ಪಂಚಾಯತಿ ದಾಖಲೆಯಲ್ಲಿ ಮನೆ, ನಿವೇಶನಗಳಿವೆ ಎಂಬ ಬಗ್ಗೆ ದಾಖಲೆ ಇದ್ದರೂ ರಸ್ತೆಗೆ ಸ್ವಾಧೀನವಾಗಿದೆ ಎಂಬ ಮಾಹಿತಿ ಇದೆ. ಅಲ್ಲದೆ ಸರ್ಕಾರಿ ಭೂಮಿಗಳನ್ನು ಅಕ್ರಮ ದಾಖಲೆ ಮಾಡಿ ಕೋಟ್ಯಾಂತರ ಹಣ ಸರ್ಕಾರದ ಹಣ ಲೂಟಿ ಮಾಡಲಾಗಿದೆ.ಸದರಿ ಭೂಮಿ, ವಸತಿ ಬಗ್ಗೆ ತನಿಖೆ ನಡೆಸಿ ಕಾನೂನು ರೀತ್ಯಾ ಕ್ರಮ ವಹಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.