ಮನೆ ರಾಜ್ಯ ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ವಿಚಾರ: ಮೋದಿ ಅವರದ್ದೇ ಅಂತಿಮ ತೀರ್ಮಾನ ಎಂದ ಬಿಎಸ್ವೈ

ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವ ವಿಚಾರ: ಮೋದಿ ಅವರದ್ದೇ ಅಂತಿಮ ತೀರ್ಮಾನ ಎಂದ ಬಿಎಸ್ವೈ

0

ಬೆಂಗಳೂರು (Bengaluru): ನಿನ್ನೆಯಷ್ಟೇ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ.ವಿಜಯೇಂದ್ರಗೆ ಬಿಟ್ಟುಕೊಟ್ಟುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಯೂಟರ್ನ್ ಹೊಡೆದಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಹೈಕಮಾಂಡ್ ಟಿಕೆಟ್ ಘೋಷಣೆಗೂ ಮೊದಲೇ ಪುತ್ರನಿಗೆ ಟಿಕೆಟ್ ಕೊಡಿಸಲು ಕ್ಷೇತ್ರ ಬಿಟ್ಟುಕೊಡುವ ಮಾತಾಡಿದ್ದಾರೆಂಬ ವಿಶ್ಲೇಷಣೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿಎಸ್ವೈ, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಿನ್ನೆ ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ. ಆದರೆ ಅಂತಿಮ ತೀರ್ಮಾನ ಮೋದಿ, ಅಮಿತ್ ಶಾ, ನಡ್ಡಾ ಅವರದ್ದು. ಪಕ್ಷದ ತೀರ್ಮಾನವೇ ಅಂತಿಮ ಎಂದರು.

ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದರು. ಆದರೆ ನಾನು ನಿಲ್ಲೋದಿಲ್ಲ. ವಿಜಯೇಂದ್ರ ನಿಲ್ತಾರೆ ಎಂದು ಹೇಳಿದೆ. ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಖಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದರೆ ಅಂತಿಮವಾಗಿ ತೀರ್ಮಾನ ಮಾಡೋದು ಪ್ರಧಾನಿ ಮೋದಿಯವರು ಎಂದರು.

ಕುಟುಂಬ ರಾಜಕೀಯ ಆಗೋದಿಲ್ವೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಮೋದಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆಗೆ ನಿಲ್ತಾ ಇಲ್ಲ‌. ನನ್ನ ಮಗ ನಿಲ್ತಾರೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದರು. 

ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ. ನನ್ನನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ್ದಾರೆ. ನಾಲ್ಕು ಬಾರಿ ಸಿಎಂ ಮಾಡಿದ್ದಾರೆ. ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು. ಅದನ್ನು ನಾನು ನೋಡಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೇ ನಮ್ಮ ಗುರಿ.‌‌ ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡುತ್ತೇನೆ ಎಂದು ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದರು.

ಇದೇ ವೇಳೆ ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮೇಲೆ ಗರಂ ಆದ ಯಡಿಯೂರಪ್ಪ, ಇದು ಮೂರ್ಖತನದ ಪರಮಾವಧಿ ಹೇಳಿಕೆ. ಅವರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.