ಮನೆ ರಾಷ್ಟ್ರೀಯ ಏಕತೆಯ ‘ಮಹಾಯಜ್ಞ’ ಮುಕ್ತಾಯ: ಮಹಾಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ

ಏಕತೆಯ ‘ಮಹಾಯಜ್ಞ’ ಮುಕ್ತಾಯ: ಮಹಾಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ

0

ನವದೆಹಲಿ: ಪ್ರಯಾಗ್​ರಾಜ್​ನಲ್ಲಿ 45 ದಿನಗಳ ಕಾಲ ನಡೆದ ಬೃಹತ್​ ಮಹಾಕುಂಭಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಏಕತೆಯ ಮಹಾಯಜ್ಞ’ ಎಂದು ಬಣ್ಣಿಸಿದ್ದಾರೆ.

Join Our Whatsapp Group

ಸಂಪನ್ನಗೊಂಡ ಮಹಾಕುಂಭಮೇಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಒಟ್ಟಾಗಿ ಬಂದ 140 ಕೋಟಿ ಭಾರತೀಯರ ಭಕ್ತಿ ಮತ್ತು ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, 45 ದಿನಗಳ ಕಾಲ ನಡೆದ ಬೃಹತ್ ಮಹಾಕುಂಭವನ್ನು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿಬಿಂಬ” ಎಂದೂ ಸಹ ವರ್ಣಿಸಿದ್ದಾರೆ.

“ಐತಿಹಾಸಿಕ ಬೃಹತ್ ಮಹಾಕುಂಭಮೇಳವು ಮುಕ್ತಾಯಗೊಂಡಿದೆ. ಸಂಗಮದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ಗುಲಾಮಗಿರಿಯ ಮನಸ್ಥಿತಿಯ ಸಂಕೋಲೆಗಳನ್ನು ಮುರಿದು ಹೊರಬಂದಿದ್ದಾರೆ. ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ಇದು ಭಾರತಕ್ಕೆ ಹೊಸ ಭವಿಷ್ಯ ಬರೆಯುವ ಯುಗದ ಬದಲಾವಣೆಯನ್ನು ಸೂಚಿಸುತ್ತದೆ” ಎಂದು ಮಹಾಕುಂಭಮೇಳದ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿದ್ದಾರೆ.

ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜನೆ ಸುಲಭವಲ್ಲ: “ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭವಲ್ಲ. ಗಂಗಾ, ಯಮುನಾ, ಸರಸ್ವತಿ ತಾಯಿಯ ಸೇವೆ ಸಲ್ಲಿಕೆಯಲ್ಲಿ ದೋಷವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಜನರಿಂದಲೂ ಕ್ಷಮೆ ಕೇಳುವೆ. ಈ ಮಹಾಕುಂಭದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರು ಒಟ್ಟುಗೂಡಿದ್ದರು. ಈ ಅವಿಸ್ಮರಣೀಯ ಏಕತೆಯ ದೃಶ್ಯವು ಕೋಟ್ಯಂತರ ಭಾರತೀಯರಿಗೆ ಆತ್ಮ ವಿಶ್ವಾಸ ತುಂಬಿದೆ. ಜನವರಿ 13 ರಂದು ಆರಂಭಗೊಂಡ ಮಹಾಕುಂಭಮೇಳಕ್ಕೆ ಕೊನೆಯ ದಿನದವರೆಗೆ 66 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಈ ಏಕತೆಯ ಮಹಾಕುಂಭ ಯಶಸ್ವಿಯಾಗಿದೆ. ಈ ಉತ್ಸವದ ಯಶಸ್ವಿಗೆ ಜನರ ಪ್ರಯತ್ನಗಳು, ಸಮರ್ಪಣೆ ಮತ್ತು ದೃಢಸಂಕವು ಕಾರಣ. ಈ ಕಾರ್ಯಕ್ರಮವು ‘ಏಕ ಭಾರತ ಶ್ರೇಷ್ಠ ಭಾರತ’ ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿದೆ” ಎಂದಿದ್ದಾರೆ.

ಕುಂಭಮೇಳದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಮೋದಿ ಅಭಿನಂದನೆ: “ಸ್ವಚ್ಛತಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೋಣಿ ಚಾಲಕರು, ಅಡುಗೆಯವರು ಸೇರಿದಂತೆ ಎಲ್ಲರೂ ತಮ್ಮ ಭಕ್ತಿ ಮತ್ತು ಸೇವೆಯ ಭಾವನೆಯಿಂದ ಅವಿರತವಾಗಿ ಕೆಲಸ ಮಾಡುವ ಮೂಲಕ ಐತಿಹಾಸಿಕ ಬೃಹತ್ ಮಹಾಕುಂಭಮೇಳವನ್ನು ಯಶಸ್ವಿಗೊಳಿಸಿದರು. ಇದು ಮುಂಬರುವ ಹಲವು ಶತಮಾನಗಳಿಗೆ ಅಡಿಪಾಯ ಹಾಕಿದಂತಾಗಿದೆ. ಮಹಾಕುಂಭಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ದಾಖಲೆ ಬರೆದಿದೆ. ಅಮೆರಿಕದ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪವಿತ್ರ ಸ್ನಾನ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭೇಟಿ ನೀಡಿದ್ದು, ತಮಗೆ ತುಂಬಾ ಖುಷಿ ನೀಡಿದೆ” ಎಂದು ಪ್ರಧಾನಿ ಮೋದಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಯೋಗಿ: 2025ರ ಮಹಾಕುಂಭಮೇಳವು ಯಶಸ್ವಿಯಾಗಿದ್ದಕ್ಕೆ ಪ್ರಧಾನಿ ಮೋದಿ ಅವರ ನಾಯಕತ್ವವೇ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿ ಧನ್ಯವಾದ ಸಲ್ಲಿಸಿದ್ದಾರೆ.