ಮನೆ ಸಾಹಿತ್ಯ ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತದೆ

ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತದೆ

0

“ಭೌತಿಕ ವಿಚಾರಗಳಲ್ಲಿ ನಮಗಿಂತ ಕೆಳಗಿನವರನ್ನು ನೋಡಬೇಕು. ಬೌಲ ವಿಚಾರಗಳಲ್ಲಿ ನಮಗಿಂತ ಮೇಲಿನವರನ್ನು ನೋಡಬೇಕು”-ಇದು ಕನ್ನಡದ ದೊಡ್ಡ ಕವಿಗಳಲೊಬ್ಬರಾದ ಪು.ತಿ. ನರಸಿಂಹಾಚಾರ್ ಅವರು ಒಂದು ಕಡೆ ಹೇಳಿರುವ ಮಾತು ಸಾಮಾನ್ಯವಾಗಿ ನನ್ನ ಸಂಪಾದನೆ ಕಡಿಮೆಯಾಯಿತು, ನನ್ನ ಮನೆ ಚಿಕ್ಕದಾಯಿತು, ನನ್ನ ಹತ್ತಿರ ಕಾರು ಇಲ್ಲ ಎಂದೆಲ್ಲ ‘ಇಲ್ಲ’ಗಳ ಬಗ್ಗೆ ಜನರು ಚಿಂತಿಸುತ್ತಿರುತ್ತಾರೆ.

Join Our Whatsapp Group

ಮೋಟಾರ್ ಸೈಕಲ್ ಇರುವವರು ಕಾರ್ ಇರುವವರನ್ನು ಕಂಡು ತಮಗೆ ಕಾರ್ ಇಲ್ಲವಲ್ಲ ಎಂದು ಕೊರಗುತ್ತಿರುತ್ತಾರೆ. ಆದರೆ ಬೈಸಿಕಲ್‌ ನಲ್ಲಿ ಓಡಾಡುವರನ್ನು ನೋಡಿ ತಮಗೆ ಮೋಟಾರ್ ಸೈಕಲ್ ಆದರೂ ಇದೆಯಲ್ಲ ಎಂದು ಯೋಚಿಸಿ ತೃಪ್ತರಾಗುವುದಿಲ್ಲ. ಇಂತಹ ವಿಚಾರಗಳಲ್ಲಿ ನಮಗಿಂತ ಬಡವರಾಗಿರುವವರನ್ನು ನೋಡಿ ನಮಗೆ ಇಷ್ಟಾದರೂ ಇದೆಯಲ್ಲ ಎಂದುಕೊಂಡು ತೃಪ್ತರಾಗಿ ಬದುಕಬೇಕು ಎನ್ನುವುದು ಪು.ತಿ. ನರಸಿಂಹಾಚಾರ್ ಅವರ ಮಾತಿನ ಒಂದು ಕಡೆಯ ತಾತ್ಪರ್ಯ. ಆದರೆ ನಾವು ಅತೃಪ್ತರೂ, ಅಸಂತುಷ್ಟರೂ ಆಗಿ ಇರಬೇಕಾದ ಅಗತ್ಯವಿದೆ.

ನಮಗಿಂತ ಹೆಚ್ಚು ಜ್ಞಾನ ಸಂಪನ್ನರಾಗಿರುವವರನ್ನು ಕಂಡು ನಮಗೆ ಅಷ್ಟು ತಿಳಿವಳಿಕೆ ಇಲ್ಲವಲ್ಲ ಎಂದು ಅತೃಪ್ತರಾಗಬೇಕು. ಅತೃಪ್ತಿಯು ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಯಾವುದರ ಬಗ್ಗೆ ನಾವು ಅತೃಪ್ತರಾಗಿದ್ದೇವೆಯೋ ಅದನ್ನು ಪಡೆದುಕೊಳ್ಳಲು ನಾವು ಹಂಬಲಿಸುತ್ತೇವೆ. ಮತ್ತು ಪ್ರಯತ್ನಶೀಲರಾಗುತ್ತೇವೆ. ಅಂತಹ ಪ್ರಯತ್ನಗಳಿಂದ ಗಳಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ. ಜ್ಞಾನವನ್ನು ಹೆಚ್ಚು ಹೆಚ್ಚು ಗಳಿಸಿಕೊಳ್ಳುವುದಕ್ಕಾಗಿ ನಾವು ನಿರಂತರ ಕ್ರಿಯಾಶೀಲರಾಗಿರಬೇಕು. ಅದಕ್ಕಾಗಿ ನಾವು ಅತೃಪ್ತರಾಗಿರಬೇಕು ಎನ್ನುವುದು ಪು.ತಿ. ನರಸಿಂಹಾಚಾರ್ ಅವರ ಮಾತಿನ ಇನ್ನೊಂದು ಕಡೆಯ ತಾತ್ಪರ್ಯ.

ನರಸಿಂಹಚಾರ್ ಅವರ ವಿಚಾರದ ಭೌತಿಕ ಅಗತ್ಯಗಳ ಬಗ್ಗೆ ತೃಪ್ತರಾಗಲು ಸಾಧ್ಯವಾಗದೆ ಇರಬಹುದು. ಯಾಕೆಂದರೆ ಅದು ಮಾನವ ಸಹಜ ಅಪೇಕ್ಷೆಯಾಗಿರುತ್ತದೆ. ಆದರೆ ಬೌದ್ಧಿಕ ವಿಚಾರಗಳಲ್ಲಿ ಅತೃಪ್ತರಾಗಿ ಇರಲು ಸಾಧ್ಯವಿದೆ. ಯಾಕೆಂದರೆ ಇದರಿಂದ ನಾವು ಕಳೆದುಕೊಳ್ಳುವಂಥಾದ್ದು ಏನೂ ಇಲ್ಲ. ಅದು ಜ್ಞಾನಕ್ಕೆ ಇರುವ ಗುಣಸ್ವಭಾವವೂ ಹೌದು. ನಮ್ಮ ಬಳಿ ಇರುವ ಎಲ್ಲ ರೀತಿಯ ಸಂಪತ್ತುಗಳನ್ನು ಉಪಯೋಗಿಸಿದಷ್ಟೂ ಖರ್ಚಾಗುತ್ತದೆ. ಮುಗಿದು ಹೋಗುತ್ತದೆ. ಆದ್ದರಿಂದ ನಮ್ಮೆಲ್ಲ ಸಂಪತ್ತುಗಳನ್ನೂ ಎಷ್ಟು ಸಾಧ್ಯವೊ  ಅಷ್ಟು ಮಿತವಾಗಿ ಖರ್ಚು ಮಾಡಬೇಕು. ಕಡಿಮೆಯನ್ನು ಖರ್ಚು ಮಾಡಿ ಹೆಚ್ಚಿನದನ್ನು  ಉಳಿಸಿಕೊಳ್ಳಲು ಪ್ರಯತ್ನಿಸಬೇಕು.

ಜೋಪಾನವಾಗಿ ರಕ್ಷಿಸಬೇಕು. ಆದರೆ ಜ್ಞಾನದ ಸ್ವಭಾವ ಬೇರೆ. ಉಳಿದ ಸಂಪತ್ತುಗಳು ಬಳಕೆ ಮಾಡದೆ ರಕ್ಷಿಸಿಟ್ಟರೆ ಉಳಿಯುತ್ತವೆ. ಆದರೆ ಜ್ಞಾನವನ್ನು ಬಳಕೆ ಮಾಡದೆ ರಕ್ಷಿಸಿಟ್ಟರೆ ಕ್ರಮೇಣ ಅದು ನಮ್ಮಿಂದ ಹೊರಟು ಹೋಗುತ್ತದೆ. ಬದಲಿಗೆ ಜ್ಞಾನವನ್ನು ಹೆಚ್ಚು ಹೆಚ್ಚು ಖರ್ಚು ಮಾಡಿದಷ್ಟೂ ಹೆಚ್ಚು ಜ್ಞಾನವು ಪ್ರಾಪ್ತವಾಗುತ್ತದೆ. ಮತ್ತು ಇರುವ ಜ್ಞಾನವು ಪ್ರಖರವಾಗುತ್ತದೆ. ತಿಳಿದುದನ್ನು ಮತ್ತೊಬ್ಬರಿಗೆ ಹೇಳಿದಾಗ ಅವರಿಂದ ಸಿಗುವ ಪ್ರತಿಕ್ರಿಯೆಯು ನಮ್ಮ ಯೋಚನೆಯನ್ನು ಹೆಚ್ಚಿಸಿ ಜ್ಞಾನವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಜ್ಞಾನವನ್ನು ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ.