“ಭುವನಂ ಗಗನಂ’- ಹೀಗೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಪೃಥ್ವಿ ಅಂಬರ್ ಹಾಗೂ ಪ್ರಮೋದ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತವಾಗಿದೆ.
ಎಸ್‌ವಿಸಿ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿ, ಎಂ.ಮುನೇ ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಸಿನಿಮಾ ಮಾಡುವ ಗುರಿ ಹೊಂದಿರುವ ಮುನೇಗೌಡ ಅವರು ಈ ಚಿತ್ರಕ್ಕೆ ಏನು ಬೇಕೋ ಅವೆಲ್ಲವನ್ನು ನೀಡುವ ಮೂಲಕ ಸಿನಿಮಾ ಪ್ರೀತಿ ತೋರಿದ್ದಾರೆ.
ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದ ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಭುವನಂ ಗಗನಂ ಒಂದು ಫ್ಯಾಮಿಲಿ ಡ್ರಾಮಾ. ಆದರೆ, ರೆಗ್ಯುಲರ್ ಕಥೆಯಲ್ಲ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್, “ಇದೊಂದು ಫ್ಯಾಮಿಲಿ ಡ್ರಾಮಾ. ಕಥೆ ಎರಡು ಟ್ರ್ಯಾಕ್‌ನಲ್ಲಿ ನಡೆಯುತ್ತದೆ. ಪ್ರಮೋದ್ ಹಾಗೂ ಪೃಥ್ವಿ ಅವರ ಟ್ರ್ಯಾಕ್‌ಗಳು ಬೇರೆ ಬೇರೆಯಾಗಿ ಸಾಗುತ್ತಾ ಬಂದು ಒಂದು ಹಂತದಲ್ಲಿ ಜೊತೆಯಾಗುತ್ತದೆ. ಅದು ಯಾಕೆ, ಅದಕ್ಕೆ ಕಾರಣ ಏನು, ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಹೈಲೈಟ್. ಸಾಕಷ್ಟು ಹೊಸ ಅಂಶಗಳೊಂದಿಗೆ ಈ ಸಿನಿಮಾ ತಯಾರಾಗಿದೆ. ಇಡೀ ತಂಡದ ಪ್ರೋತ್ಸಾಹದಿಂದ ಸಿನಿಮಾ ಅಂದುಕೊಂಡಂತೆ ಮೂಡಿಬಂದಿದೆ’ ಎನ್ನುವುದು ನಿರ್ದೇಶಕರ ಮಾತು.