ನವದೆಹಲಿ: ‘ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬು ಆಗಿದ್ದು, ಅದನ್ನು ಕಡೆಗಣಿಸಲು ಪ್ರಾರಂಭಿಸಿದ ಕ್ಷಣ ನಮ್ಮ ಕ್ರಿಕೆಟ್‌ನ ಬೆನ್ನಹುರಿಯೇ ಇಲ್ಲದಂತಾಗುತ್ತದೆ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಎಚ್ಚರಿಸಿದ್ದಾರೆ.
ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯನ್ನು ನಿರ್ಲಕ್ಷಿಸಿದರೆ ಭಾರತೀಯ ಕ್ರಿಕೆಟ್‌ನ ಬೆನ್ನುಹುರಿಯೇ ಇಲ್ಲದಂತಾಗುತ್ತದೆ. ಈ ವರ್ಷದ ಟೂರ್ನಿಯನ್ನು ಜನವರಿ 13ರಂದು ಆರಂಭಿಸಬೇಕಿತ್ತು. ಆದರೆ, ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಈಗ ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಲೀಗ್ ಹಂತದ ಪಂದ್ಯಗಳು ಮತ್ತು ಎರಡನೇ ಹಂತದಲ್ಲಿ ಜೂನ್‌ನಲ್ಲಿ ನಾಕೌಟ್ ಪಂದ್ಯಗಳನ್ನು ಯೋಜಿಸಲಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
38 ತಂಡಗಳು ಭಾಗವಹಿಸುವ ಟೂರ್ನಿಯು ಫೆಬ್ರುವರಿ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.ಮಾರ್ಚ್ 27ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ. ಇದರಿಂದಾಗಿ ರಣಜಿ ಟ್ರೋಫಿ ವೇಳಾಪಟ್ಟಿಗೆ ಸಮಸ್ಯೆ ಎದುರಾಗಿದೆ.