ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆ (ನ್ಯೂಟ್ರಲ್ ಸೈಟೇಷನ್ ಸಿಸ್ಟಂ) ಜಾರಿಗೆ ತಂದಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಗುರುವಾರ ಮುಕ್ತ ನ್ಯಾಯಾಲಯದಲ್ಲಿ ಹೇಳಿದರು.
ನ್ಯಾಯಾಲಯ ನೀಡುವ ಮತ್ತು ಈಗಾಗಲೇ ನೀಡಿರುವ ಎಲ್ಲಾ ತೀರ್ಪುಗಳಲ್ಲಿ ತಟಸ್ಥ ಉಲ್ಲೇಖ ವ್ಯವಸ್ಥೆ ಇರಲಿದ್ದು ಮೂರು ಹಂತಗಳಲ್ಲಿ ಅದನ್ನು ಮಾಡಲಾಗುತ್ತದೆ. 2014ರಿಂದ ಇಂದಿನವರೆಗಿನ ತೀರ್ಪುಗಳನ್ನು ಒಳಗೊಂಡಿರುವ ಮೊದಲ ಕಂತು ಈಗಾಗಲೇ ಪೂರ್ಣಗೊಂಡಿದೆ. ಎರಡನೇ ಭಾಗದಲ್ಲಿ 1995ರಿಂದ 2013ರವರೆಗಿನ ತೀರ್ಪುಗಳಿಗೆ ಮತ್ತು ಮೂರನೆಯ ಕಂತಿನಲ್ಲಿ 1950ರಿಂದ 1994 ರವರೆಗೆ ನೀಡಲಾದ ತೀರ್ಪುಗಳಿಗೆ ಈ ವ್ಯವಸ್ಥೆ ಬರಲಿದೆ.
ನ್ಯಾಯಾಲಯವು ತನ್ನ ತೀರ್ಪುಗಳನ್ನು ಇಂಗ್ಲಿಷ್ನಿಂದ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ಯಂತ್ರ ಕಲಿಕಾ ಸಾಧನಗಳನ್ನು (ಮೆಷೀನ್ ಲರ್ನಿಂಗ್ ಟೂಲ್ಸ್) ಬಳಸಲಿದೆ. ಇದುವರೆಗೆ 2,900 ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಅನುವಾದಿಸಲಾಗಿದೆ. ತೀರ್ಪಿನ ಯಂತ್ರ ಕಲಿಕೆಯ ಅನುವಾದಗಳನ್ನು ಪರಿಶೀಲಿಸಲು ನಾವು ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದೇವೆ ಎಂದು ಕೂಡ ಸಿಜೆಐ ಹೇಳಿದರು.
ಯಂತ್ರ ಕಲಿಕಾ ಭಾಷಾಂತರಗಳು ದೋಷರಹಿತ ಎಂಬದನ್ನು ಪರಿಶೀಲಿಸಲು ನಮ್ಮಲ್ಲಿ ಜಿಲ್ಲಾ ನ್ಯಾಯಾಧೀಶರು, ಕಾನೂನು ಸಂಶೋಧಕರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ತಂಡವನ್ನು ನೇಮಿಸಿರುವುದಾಗಿ ಅವರು ಹೇಳಿದರು.
ಕಳೆದ ವರ್ಷ ನವೆಂಬರ್’ನಲ್ಲಿ, ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಏಕರೂಪದ ಮತ್ತು ವಿಶಿಷ್ಟವಾದ ಉಲ್ಲೇಖವನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಲು ಹೈಕೋರ್ಟ್ ನ್ಯಾಯಮೂರ್ತಿಗಳ ಮೂರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ದೆಹಲಿ, ಕೇರಳ ಹಾಗೂ ಮದ್ರಾಸ್ ಹೈಕೋರ್ಟ್’ಗಳು ಈಗಾಗಲೇ ತಮ್ಮ ತೀರ್ಪುಗಳಲ್ಲಿ ತಟಸ್ಥ ಉಲ್ಲೇಖವನ್ನು ಪರಿಚಯಿಸಿವೆ.
ತಟಸ್ಥ ಉಲ್ಲೇಖ ವ್ಯವಸ್ಥೆ ಎಂದರೇನು?
ತನ್ನ ತೀರ್ಪಿಗೆ ನ್ಯಾಯಾಲಯ ನೀಡುವ ಅನನ್ಯ ಅನುಕ್ರಮ ಸಂಖ್ಯೆಯೇ ತಟಸ್ಥ ಉಲ್ಲೇಖ ವ್ಯವಸ್ಥೆ. ಯಾವುದೇ ಮಾಧ್ಯಮದಲ್ಲಿ ತೀರ್ಪು ಪ್ರಕಟವಾದರೂ ಬದಲಾಗದೇ ಇರುವ ಉಲ್ಲೇಖ ಸಂಖ್ಯೆಯನ್ನು ತೀರ್ಪಿನ ಜೊತೆಗೆ ಪ್ರಕಟಿಸುವ ಮೂಲಕ ಪ್ರಕರಣಗಳನ್ನು ಮತ್ತು ತೀರ್ಪಿನ ಸಾರಂಶವನ್ನು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡುವುದು ಇದರ ಉದ್ದೇಶ.
ಡಿಜಿಟಲ್ ಯುಗದ ಅಗತ್ಯವಾಗಿರುವ ಇದು ನ್ಯಾಯಾಲಯಗಳಿಗೆ, ನ್ಯಾಯಾಂಗ ಆಡಳಿತಕ್ಕೆ, ಕಾನೂನು ಸಮುದಾಯಕ್ಕೆ, ವಿದ್ಯಾರ್ಥಿಗಳು ಸಂಶೋಧಕರಿಗೆ ಕಾನೂನು ಪ್ರಕಾಶಕರಿಗೆ ಹಲವು ಬಗೆಯ ಸಹಾಯ ಮಾಡುತ್ತದೆ. ಜಾಲತಾಣದಲ್ಲಿ ತೀರ್ಪುಗಳನ್ನು ನ್ಯಾಯಾಲಯಗಳು ಪ್ರಕಟಿಸಿದಾಗ ಕ್ರಮಬದ್ಧತೆ ಇರುವಂತೆ ನೋಡಿಕೊಳ್ಳಲು, ಆಂತರಿಕ ಮತ್ತು ಸಾರ್ವಜನಿಕ ಮಾಹಿತಿ ವ್ಯವಸ್ಥೆಯನ್ನು ಸರಳವಾಗಿ ಜಾರಿಗೊಳಿಸಲು, ಕಾನೂನು ಗ್ರಂಥಾಲಯಗಳನ್ನು ಸುಲಭವಾಗಿಸಲು ಇದು ಪೂರಕವಾಗಿದೆ. ಅಷ್ಟೇ ಅಲ್ಲದೆ ಸಂಶೋಧನೆಗಳಿಗೆ ಸಹಕಾರಿಯಾಗುತ್ತದೆ, ಕಾನೂನು ವೆಚ್ಚ ನಿಯಂತ್ರಿಸಲು ಕೂಡ ಇದು ಬಳಕೆಯಾಗುತ್ತದೆ.
ತೀರ್ಪು ಪ್ರಕಟವಾದ ವರ್ಷ, ಅಧಿಕಾರವ್ಯಾಪ್ತಿ ಮತ್ತು ನ್ಯಾಯಾಲಯ, ಅನನ್ಯ ಪ್ರಕರಣ ಸಂಖ್ಯೆ #, ಕೆಲವೊಮ್ಮೆ ವಿಭಾಗ ಅಥವಾ ಪಟ್ಟಿಯನ್ನು ಅದು ಒಳಗೊಂಡಿರುತ್ತದೆ. ಉದಾಃ [2017] INSC Crim #ಅಥವಾ ಕರ್ನಾಟಕ ಹೈಕೋರ್ಟ್ ಎಂದಿದ್ದರೆ [2017] KTKHC # ಎಂದು ತೀರ್ಪಿನಲ್ಲಿ ಸಂಖ್ಯೆ ಮೂಡಬಹುದು. (ವಿ ಸೂ: ಈ ಸಂಖ್ಯೆಗಳು ಉದಾಹರಣೆಗಾಗಿ ನೀಡಲಾದ ಮಾಹಿತಿಯೇ ವಿನಾ ನಿಖರವಾದ ಸಂಖ್ಯೆಗಳಲ್ಲ).