ತೀರ್ಪಿನ ವಿವರವಾದ ಪಠ್ಯ ಸಿದ್ಧಪಡಿಸದೆ ಕಾರ್ಯಕಾರಿ ಭಾಗ ಅಥವಾ ತೀರ್ಪಿನ ಅಂತಿಮ ಅಂಶಗಳನ್ನು ಉಚ್ಚರಿಸಿದ ಸಿವಿಲ್ ನ್ಯಾಯಾಧೀಶರೊಬ್ಬರನ್ನು ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಪೂರ್ಣ ನ್ಯಾಯಾಲಯದ ಆಡಳಿತಾತ್ಮಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
[ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತಿತರರು ಹಾಗೂ ಎಂ ನರಸಿಂಹ ಪ್ರಸಾದ್ ನಡುವಣ ಪ್ರಕರಣ].
ಇದೇ ವೇಳೆ ನ್ಯಾಯಾಧೀಶರ ವಜಾ ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ರದ್ದುಗೊಳಿಸಿತು.
ತೀರ್ಪನ್ನು ಮುದ್ರಿಸಿಕೊಳ್ಳುವ ಸ್ಟೆನೊ ಅಸಮರ್ಥರು ಎಂಬ ಸಿವಿಲ್ ನ್ಯಾಯಾಧೀಶರ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ.
“ನ್ಯಾಯಾಂಗ ಅಧಿಕಾರಿ ತನ್ನ ತೀರ್ಪಿನ ಸಂಪೂರ್ಣ ಪಠ್ಯ ಸಿದ್ಧಪಡಿಸದೆ ಇಲ್ಲವೇ ಉಕ್ತಲೇಖನ ನೀಡದೆ ತೆರೆದ ನ್ಯಾಯಾಲಯದಲ್ಲಿ ತನ್ನ ತೀರ್ಪಿನ ಅಂತಿಮ ಭಾಗವನ್ನು ಉಚ್ಚರಿಸುವಂತಿಲ್ಲ. ಇಲಾಖಾ ವಿಚಾರಣೆಯ ವೇಳೆ ಪ್ರತಿವಾದಿಯು ತಪ್ಪೆಲ್ಲವನ್ನೂ ಅಸಮರ್ಥ, ಅನನುಭವಿ ಎಂದು ಆರೋಪಿಸಲಾದ ಸ್ಟೆನೊ ಮೇಲೆ ಹೊರಿಸಿಬಿಡುವ ಕೆಲಸ ಮಾಡಿದ್ದಾರೆ. ಅಂತಹ ಗಂಭೀರ ಆರೋಪಗಳನ್ನು ಹೈಕೋರ್ಟ್ (ವಿಭಾಗೀಯ ಪೀಠ) ಹೇಗೆ ಸಂಪೂರ್ಣವಾಗಿ ನಿರ್ಲಕ್ಷಿಸಿತೋ ತಿಳಿಯುತ್ತಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತೀರ್ಪಿನ ಘೋಷಣೆ ಮತ್ತು ನಿರ್ಣಯಿಸುವ ಪ್ರಕ್ರಿಯೆಯ ಸುತ್ತ ಕೆಲವು ಆರೋಪಗಳಿವೆ. ಹೀಗಾಗಿ ಅವುಗಳು ಇಲಾಖಾ ವಿಚಾರಣೆಯ ಅಡಿಪಾಯವಾಗಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.
ತೀರ್ಪು ಸಿದ್ದಪಡಿಸದೆ ತೀರ್ಪಿನ ಅಂತಿಮ ಅಂಶಗಳನ್ನು ಒದಗಿಸುವಲ್ಲಿ ತೋರಿದ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಎಳ್ಳಷ್ಟೂ ಸ್ವೀಕಾರಾರ್ಹವಲ್ಲ. ಅದು ನ್ಯಾಯಾಂಗ ಅಧಿಕಾರಿಗೆ ಯೋಗ್ಯವಾದುದಲ್ಲ ಎಂದು ನ್ಯಾಯಾಲಯ ತಿಳಿಸಿದೆ.
“ಮುಕ್ತ ನ್ಯಾಯಾಲಯದಲ್ಲಿ ತೀರ್ಪು ನೀಡಿದ ಹಲವು ದಿನಗಳ ನಂತರವೂ ತೀರ್ಪಿನ ಸಂಪೂರ್ಣ ಪಠ್ಯ ಸಿದ್ಧಪಡಿಸದೆ ಇದ್ದುದಕ್ಕಾಗಿ, ಸ್ಟೆನೋಗ್ರಾಫರ್ನ ಅನುಭವದ ಕೊರತೆ ಮತ್ತು ಅದಕ್ಷತೆಯನ್ನು ದೂಷಿಸಬೇಕಾಗುತ್ತದೆ ಎಂಬ ಪ್ರತಿವಾದಿಯ ವಾದ ಸ್ವಲ್ಪವೂ ಸ್ವೀಕಾರಾರ್ಹವಲ್ಲ” ಎಂದು ನ್ಯಾಯಾಲಯ ಹೇಳಿದೆ.
ಆದರೆ ದುರದೃಷ್ಟವಶಾತ್ ಸಿವಿಲ್ ನ್ಯಾಯಾಧೀಶರ ಈ ‘ಪಂಚತಂತ್ರದ ಕಥೆ’ಗೆ ಹೈಕೋರ್ಟ್ ತಲೆದೂಗಿದ್ದು, ಸ್ಟೆನೋಗ್ರಾಫರ್ ಅವರನ್ನು ಸಾಕ್ಷಿಯಾಗಿ ಪ್ರಶ್ನಿಸಿಲ್ಲ. ಇದು ಇಡಿಯಾಗಿ ಸಮರ್ಥನೀಯವಲ್ಲ ಎಂಬುದಾಗಿ ನ್ಯಾಯಾಲಯ ಹೇಳಿತು.
ಸಿವಿಲ್ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿದ ತೀರ್ಪನ್ನು ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ನ್ಯಾಯಾಧೀಶರನ್ನು 2005ರಲ್ಲಿ ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಿದಾಗ ಕೆಲವು ಆರೋಪಗಳು ಸಾಬೀತಾಗಿದ್ದವು. ಹೈಕೋರ್ಟ್ ಪೂರ್ಣ ಪೀಠ ಪ್ರತಿವಾದಿಯನ್ನು ಸೇವೆಯಿಂದ ವಜಾಗೊಳಿಸಲು ನಿರ್ಧಾರ ಕೈಗೊಂಡಿತು. ಈ ನಿರ್ಣಯ ಆಧರಿಸಿ ಕರ್ನಾಟಕದ ರಾಜ್ಯಪಾಲರು 2009ರಲ್ಲಿ ಪ್ರತಿವಾದಿಯನ್ನು ಸೇವೆಯಿಂದ ವಜಾಗೊಳಿಸಿದ್ದರು. ಆದರೆ ತನಿಖಾಧಿಕಾರಿಯ ವರದಿಯನ್ನು ಪ್ರಶ್ನಿಸಿ ಮತ್ತು ತಮ್ಮನ್ನು ವಜಾಗೊಳಿರುವುದರ ವಿರುದ್ಧ ಪ್ರತ್ಯೇಕ ಅರ್ಜಿಗಳನ್ನು ಪ್ರತಿವಾದಿ ಹೈಕೋರ್ಟ್ಗೆ ಸಲ್ಲಿಸಿದ್ದರು. ಅರ್ಜಿಗಳನ್ನು ಏಕಾಸದಸ್ಯ ಪೀಠ ವಜಾಗೊಳಿಸಿತು. ಆದರೆ ಇದನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಧೀಶರು ಸಲ್ಲಿಸಿದ ಮೇಲ್ಮನವಿಗಳನ್ನು ನವೆಂಬರ್ 2011 ರಲ್ಲಿ ವಿಭಾಗೀಯ ಪೀಠ ಪುರಸ್ಕರಿಸಿತು. ಈ ಆದೇಶವನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಶಿಕ್ಷೆಯ ಆದೇಶ ಮತ್ತು ತನಿಖಾಧಿಕಾರಿಯ ತೀರ್ಮಾನಗಳನ್ನು ಬದಿಗೆ ಸರಿಸಿರುವ ಹೈಕೋರ್ಟ್ನ ವಿಚಿತ್ರ ಅದೇಶವು ಅಷ್ಟು ಮಾತ್ರವೇ ಅಲ್ಲದೆ ಪ್ರತಿವಾದಿಯ ವಿರುದ್ಧ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿರುವ ಬಗ್ಗೆ ಎಂದು ಸುಪ್ರೀಂ ಕೋರ್ಟ್ ತನ್ನ ತೀವ್ರ ಅಸಮಾಧಾನ ಸೂಚಿಸಿದೆ.
ಪ್ರತಿವಾದಿಯ ವಿರುದ್ಧದ ಆರೋಪಗಳನ್ನು ಪರಿಶೀಲಿಸಿದ ನ್ಯಾಯಾಲಯ ನಿರ್ದಿಷ್ಟವಾಗಿ ಎರಡು ಆರೋಪಗಳು ತುಂಬಾ ಗಂಭೀರವಾಗಿವೆ ಎಂಬ ತೀರ್ಮಾನಕ್ಕೆ ಬಂದಿತು. ಜೊತೆಗೆ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿವಾದಿಯ ಉತ್ತರ ದುರ್ಬಲವಾಗಿತ್ತು ಎಂದು ಅದು ಹೇಳಿತು.
ಪ್ರತಿವಾದಿಯು ತೀರ್ಪನ್ನು ಸಿದ್ಧಪಡಿಸದೇ ತೀರ್ಪಿನ ಅಂತಿಮ ಭಾಗವನ್ನು ತೆರೆದ ನ್ಯಾಯಾಲಯದಲ್ಲಿ ಉಚ್ಚರಿಸಿದ್ದಾರೆ. ಜೊತೆಗೆ ಕ್ರಿಮಿನಲ್ ಪ್ರಕರಣಗಳಲ್ಲಿ ಸಾರ್ವಜನಿಕವಾಗಿ ಹರಾಜಿಗಿಟ್ಟ ಆಸ್ತಿಗಳನ್ನು ಅಕ್ರಮವಾಗಿ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದಲ್ಲದೆ, ಪ್ರತಿವಾದಿಯು ಅನನುಭವಿ ಎಂದು ಆಪಾದಿಸಲಾದ ಸ್ಟೆನೋಗ್ರಾಫರ್ಗೇ ಜವಾಬ್ದಾರಿಯನ್ನು ವರ್ಗಾಯಿಸಿದ್ದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ, ಈ ಹೇಳಿಕೆಗಳನ್ನು ಹೈಕೋರ್ಟ್ ಸಂಪೂರ್ಣ ಒಪ್ಪಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿತು.
ಹೈಕೋರ್ಟ್ ಶಿಕ್ಷೆಯ ಆದೇಶವನ್ನು ಸರಿಯಾಗಿ ಪರಿಶೀಲಿಸಲಿಲ್ಲ ಬದಲಿಗೆ ಸಿವಿಲ್ ನ್ಯಾಯಾಧೀಶರು ಎದುರಿಸಿದ ಸಮಸ್ಯೆಗಳ ಬಗ್ಗೆ ನೇರ ಮಾಹಿತಿ ಪಡೆದರು ಎಂದು ನ್ಯಾಯಾಲಯ ಹೇಳಿದೆ.
ಪ್ರತಿವಾದಿಯ ಕ್ರಮಗಳು ಗಂಭೀರ ಕೃತ್ಯವಲ್ಲ ಎಂಬ ಹೈಕೋರ್ಟ್ನ ಅಭಿಪ್ರಾಯ ಕುತೂಹಲಕಾರಿಯಾಗಿದೆ ಎಂದು ಪೀಠ ಹೇಳಿದೆ. ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ʼಅತ್ಯಂತ ಕ್ರೂರʼವಾದುದು ಎಂಬ ಹೈಕೋರ್ಟ್ನ ವಿಭಾಗೀಯ ಪೀಠದ ಅಭಿಪ್ರಾಯ ಹೈಕೋರ್ಟ್ನ ಪೂರ್ಣ ನ್ಯಾಯಾಲಯದ ಮೇಲಿನ ದಾಳಿಗೆ ಸಮನಾಗಿದೆ ಎಂದು ಅದು ಹೇಳಿದೆ.
ಪ್ರತಿವಾದಿಯನ್ನು ಮುಗ್ಧ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೈಕೋರ್ಟ್ ಪ್ರಮಾಣೀಕರಿಸಿದೆ. ಅದು ಹೇಗೆ ಈ ತೀರ್ಮಾನ ಕೈಗೊಂಡಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಹೀಗಾಗಿ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ ಅದು ವಿಭಾಗೀಯ ಪೀಠದ ಆದೇಶವನ್ನು ರದ್ದುಗೊಳಿಸಿ ಪ್ರತಿವಾದಿಯನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಎತ್ತಿಹಿಡಿಯಿತು.