ಬೆಂಗಳೂರು:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲಿದೆ. ಅದರ ಆಧಾರದ ಮೇಲೆ ವೈಜ್ಞಾನಿಕವಾಗಿ ನಡೆದಿದ್ದು ಏನು ಎಂದು ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಳಗ್ಗೆ ತಮ್ಮ ನಿವಾಸ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿನ ಗೃಹ ಸಚಿವ ಕೆ ಜೆ ಜಾರ್ಜ್ ವಿರುದ್ಧ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಬಂದಿದ್ದಾಗ ಆರಂಭದಲ್ಲಿ ಪೊಲೀಸರಿಗೆ ವಿಡಿಯೊ ಸಿಕ್ಕಿದ್ದರೂ, ಡೆತ್ ನೋಟ್ ಸಿಕ್ಕಿದ್ದರೂ ಕೋರ್ಟ್ ನಿಂದ ಆದೇಶ ಬಂದ ಮೇಲಷ್ಟೇ ಎಫ್ಐಆರ್ ಆಗಿತ್ತು. ಆದರೆ ನಾವು ಆರೋಪ ಕೇಳಿ ಬಂದ ತಕ್ಷಣ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಿಸಿ ತನಿಖೆ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಅವರ ಆಡಳಿತ ಸಮಯದಲ್ಲಿ ಯಾವೆಲ್ಲಾ ಪ್ರಕರಣಗಳನ್ನು ಮುಚ್ಚಿಹಾಕಿದ್ದಾರೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಇಂದು ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವ ಸೆಕ್ಷನ್ ಹಾಕಬೇಕು, ಏನು ದೂರು ಸಲ್ಲಿಸಬೇಕು ಎಂದು ಕಾನೂನುಬದ್ಧವಾಗಿ ಆಗುತ್ತದೆ, ಪ್ರಾಥಮಿಕ ತನಿಖೆಯಾಗಲಿ, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಚಾರ್ಚ್ ಶೀಟ್ ಸಲ್ಲಿಕೆಯಾದ ಮೇಲೆ ಕೋರ್ಟ್ ನಲ್ಲಿ ತನಿಖೆಯಾಗಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಮತ್ತು ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಯಾತ್ರೆ ಹೊರಟಿದ್ದಾರೆ, ಭ್ರಷ್ಟಾಚಾರದ ಆರೋಪವನ್ನು ಬಿಜೆಪಿ ಸರ್ಕಾರ ಮೇಲೆ ಹೊರಿಸುತ್ತಿದ್ದಾರೆ. ನಮ್ಮನ್ನು ಪ್ರಶ್ನೆ ಮಾಡುವವರು ಇವರು ಎಷ್ಟು ಶುದ್ಧಹಸ್ತದವರು ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರ ಬೀರುವಿನಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರ ಎಷ್ಟಿದೆ ಎಂದು ಲೆಕ್ಕಹಾಕಿಕೊಳ್ಳಲಿ, ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷದವರನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ. ಯಾವ್ಯಾವ ನಾಯಕರು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ. ಕಾಂಗ್ರೆಸ್ ಪಕ್ಷದ ಹಗರಣಗಳನ್ನು ನಾವು ಜನತೆಯ ಮುಂದಿಡುವ ಕಾಲ ಬರುತ್ತದೆ ಎಂದರು.