ದಾವಣಗೆರೆ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಪತ್ನಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಬುದ್ಧಬಸವ ನಗರದಲ್ಲಿ ನಡೆದಿದೆ.
ಮಹಾಂತೇಶ ಹಾನಗಲ್ ಕೊಲೆಯಾದ ದುರ್ದೈವಿ.
ಆತನ ಪತ್ನಿ ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಶ್ವೇತಾ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಬುದ್ಧಬಸವ ನಗರದಲ್ಲೇ ಚಂದ್ರಶೇಖರ್ ಎಂಬಾತ ವಾಸಿಸುತ್ತಿದ್ದು, ಈತ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನೊಂದಿಗೆ ಶ್ವೇತಾ ಗೆಳೆತನ ಸಾಧಿಸಿದ್ದು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಹಾಂತೇಶ ಹಾನಗಲ್ ರನ್ನು ಶ್ವೇತಾ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾಂತೇಶ ಹಾನಗಲ್ ಅವರು, ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯಲ್ಲಿ ಶ್ವೇತಾಳನ್ನು ವಿವಾಹವಾಗಿದ್ದರು. ತನ್ನ ಜೀವನಕ್ಕೋಸ್ಕರ ಊರಿನಲ್ಲಿ ಕಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಶ್ವೇತಾ ಮತ್ತು ಮಹಾಂತೇಶ್ ದಂಪತಿಗೆ ಅವಳಿ ಮಕ್ಕಳಿದ್ದರು. ಶ್ವೇತಾ ಜೊತೆಗೆ ಸಂಬಂಧ ಬೆಳೆಸಿದ್ದ ಚಂದ್ರಶೇಖರ, ಮಹಾಂತೇಶ ಅವರ ಬಾಲ್ಯಸ್ನೇಹಿತನಾಗಿದ್ದ.
ಶ್ವೇತಾ ವಕೀಲರೊಬ್ಬರ ಕಚೇರಿಯಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗ ಚಂದ್ರಶೇಖರ್ ಹಾಗೂ ಶ್ವೇತಾ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರಿಗೆ ಗಂಡ ಮಹಾಂತೇಶ್ ಅಡ್ಡಿಯಾಗಿದ್ದ. ಅದಕ್ಕಾಗಿ ತನ್ನ ಪ್ರಿಯಕರನ ಜತೆ ಶ್ವೇತಾ ತನ್ನ ಗಂಡನನ್ನು ಕೊಲೆ ಮಾಡುವುದಕ್ಕಾಗಿ ಪ್ಲಾನ್ ರೂಪಿಸಿದ್ದಳು. ನಂತರ ತನ್ನ ಗಂಡ ಮಹಾಂತೇಶ್ ನನ್ನು ದಾವಣಗೆರೆಗೆ ಕರೆಸಿಕೊಂಡು, ರಿಂಗ್ ರಸ್ತೆಯಲ್ಲಿ ಮಹಾಂತೇಶ್ ನ ಕತ್ತು ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡುತ್ತಾರೆ.
ಬೆಳಗ್ಗೆ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಹೊಯ್ಸಳ ವಾಹನದ ಸಿಬ್ಬಂದಿ ಇನ್ನೂ ಉಸಿರಾಡುತ್ತಿದ್ದ ಮಹಾಂತೇಶ್ ನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ, ಮಹಾಂತೇಶ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ತನಿಖೆಗೆ ತಂಡ ರಚನೆಯಾಗಿತ್ತು.
ಆರೋಪಿಗಳಿಂದ ಕೊಲೆಗೆ ಬಳಸಿದ್ದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ 2 ದ್ವಿಚಕ್ರ ವಾಹನಗಳು, 2 ಮೊಬೈಲ್ ಪೋನ್, 1 ಚಾಕು, ಬಿಯರ್ ಬಾಟಲ್ ಹಾಗೂ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.














