ಮನೆ ಸ್ಥಳೀಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ:ಅಭಿಷೇಕ್ ಮನು ಸಿಂಘ್ವಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ:ಅಭಿಷೇಕ್ ಮನು ಸಿಂಘ್ವಿ

0

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಮಾಧ್ಯಮಗಳ ಸೃಷ್ಟಿ. ನಾಯಕತ್ವ ಬದಲಾವಣೆಯಂತಹ ಯಾವುದೇ ಚರ್ಚೆಗಳು ಸದ್ಯ ಪಕ್ಷದ ಮಟ್ಟದಲ್ಲಿ ನಡೆದಿಲ್ಲ ಎಂದು ಎಐಸಿಸಿ ವಕ್ತಾರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಶನಿವಾರ ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಮಂತ್ರಿಗಳ ಜತೆ ಉತ್ತಮ ಸಮನ್ವಯವಿದೆ. ಅನಿವಾರ್ಯ ಆದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇ ೪ರಷ್ಟು ಮೀಸಲಾತಿ ನೀಡುವ ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಿ, `ಇದು ಸರ್ಕಾರಗಳ ಅಧಿಕಾರ. ಹಿಂದುಳಿದ ವರ್ಗಗಳಿಗೆ ಸಂವಿಧಾನಬದ್ಧವಾಗಿ ಬೆಂಬಲ ನೀಡುವುದು ತಪ್ಪಲ್ಲ. ತಕರಾರು ಇದ್ದಲ್ಲಿ ಕಾನೂನಿನ ಮೊರೆ ಹೋಗಲು ಬಿಜೆಪಿಗೆ ಅವಕಾಶವಿದೆ’ ಎಂದರು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕೇವಲ ಅರ್ಧ ಸತ್ಯ ಮಾತ್ರ ಹೇಳುತ್ತಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ದಕ್ಷಿಣ ರಾಜ್ಯಗಳ ಕ್ಷೇತ್ರ ಕಡಿಮೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆಯೇ ಹೊರತು ಉತ್ತರ ಭಾರತದ ಕ್ಷೇತ್ರಗಳ ಹೆಚ್ಚಳ ಆಗುವುದಿಲ್ಲ ಎಂದು ಹೇಳುತ್ತಿಲ್ಲ. ಅವರ ಮಾತಿನಲ್ಲಿ ಅರ್ಧ ಸತ್ಯವಿದೆ. ಈ ಕುರಿತು ಸರ್ವಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳುವ ಅಗತ್ಯವಿದೆ ಕ್ಷೇತ್ರ ಪುನರ್ ವಿಂಗಡಣೆ ವಿಚಾರವಾಗಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಯೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ. ಕರ್ನಾಟದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಒಕ್ಕೂಟ ವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವ್ಯತಿರಿಕ್ತವಾಗಿ ಕ್ಷೇತ್ರ ಪುನರ್ ವಿಂಗಡಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವಿಎಂ ತಕರಾರು ಇಲ್ಲ: ಯಾವುದೇ ಚುನಾವಣೆಗಳಲ್ಲಿ ಇವಿಎಂ ಬಳಕೆ ಬಗ್ಗೆ ನಮಗೆ ತಕರಾರಿಲ್ಲ, ಆದರೆ, ಚುನಾವಣೆ ಪ್ರಕ್ರಿಯೆಯಲ್ಲಿ ಕೆಲವು ಗೊಂದಲಗಳಿವೆ. ಮಹಾರಾಷ್ಟ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡುವೆ ಕೇವಲ ನಾಲ್ಕು ತಿಂಗಳಲ್ಲೇ ೪೩ ಲಕ್ಷ ಮತದಾರರು ಹೆಚ್ಚಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಇದೇ ಆರೋಪ ಕೇಳಿಬಂದಿದೆ. ಇವಿಎಂಗಳಲ್ಲಿ ಚಲಾವಣೆಯಾದ ಮತಗಳ ತಾಳೆ ಹಾಕುವ ಪ್ರಕ್ರಿಯೆಯನ್ನು ಕನಿಷ್ಠ ಶೇ ೨೫ರಿಂದ ೩೩ರಷ್ಟನ್ನು ನಡೆಸಬೇಕು ಎನ್ನುವುದು ನಮ್ಮ ಒತ್ತಾಯ. ಆದರೆ, ಕೇಂದ್ರ ಹಾಗೂ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಆದೇಶದ ನಂತರ ಕೇವಲ ಶೇ ೫ರಷ್ಟು ಮತಗಳ ಪರಿಶೀಲನೆ ನಡೆಸುತ್ತಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ’ ಎಂದು ಹೇಳಿದರು.

ರಾಷ್ಟ್ರೀಯತೆ ವಿಷಯದಲ್ಲಿ ಒಂದಾಗಬೇಕು : ರಾಷ್ಟ್ರೀಯತೆ ವಿಚಾರ ಬಂದಾಗ ನಾವು ಪಕ್ಷ ಬೇಧ ಮರೆತು ಒಂದೂಗೂಡಿ ಒಗ್ಗಟ್ಟು ಪ್ರದರ್ಶನ ಮಾಡುತ್ತೇವೆ. ಆದರೆ ಪ್ರಚಾರಕೋಸ್ಕರ, ಕೇವಲ ಒಂದು ಫೋಟೋಗೋಸ್ಕರ ನಡೆಯುವ ಘಟನೆಗಳನ್ನು ಖಂಡಿಸುತ್ತೇವೆ ಎಂದು ಸಿಂಘ್ವಿ ಅವರು ಅಮೇರಿಕಾದ ಸುಂಕ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಕರ್ನಾಟಕದಲ್ಲಿ ಉತ್ತಮ ಆಡಳಿತ: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಉತ್ತಮವಾದ ಆಡಳಿತವನ್ನು ನೀಡುತ್ತಿದೆ. ಕಾಂಗ್ರೆಸ್‌ನ ತತ್ವ-ಸಿದ್ಧಾಂತಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಸವಣ್ಣನ ಕಾಯಕತತ್ವದ ಆಶಯದಂತೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮೈಸೂರಿಗೆ ಆಗಮಿಸಿದ್ದ ಅವರು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಲೀಗಲ್ ಸೆಲ್ ರಾಜ್ಯಾಧ್ಯಕ್ಷ ಧನಂಜಯ್ಯ, ವಕೀಲರಾದ ಚಂದ್ರ ಮೌಳಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಎನ್.ಭಾಸ್ಕರ್, ವಕೀಲರಾದ ಕಾಂತರಾಜ್, ವೈದ್ಯನಾಥ್ ಉಪಸ್ಥಿತರಿದ್ದರು.