ಚಿಕ್ಕಮಗಳೂರು: ಕಾಂಗ್ರೆಸ್ ಕೋಮಾ ಸ್ಟೇಜಲ್ಲಿರೋ ಬೀಳೋ ನುಗ್ಗೆ ಮರ ಇದ್ದ ಹಾಗೆ. ಅವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನ ಕಾಂಗ್ರೆಸ್‌ನವರು ನೇಮಿಸಿದ್ರೆ, ಅವರು ಹೇಳಿದ ಹಾಗೆ ರಾಜೀನಾಮೆ ಕೊಡಬಹುದಿತ್ತು. ನನ್ನನ್ನು ನೇಮಿಸಿರುವುದು ಬಿಜೆಪಿ, ಈ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿರುವ ಪಾರ್ಟಿ ಬಿಜೆಪಿ. ಕಾಂಗ್ರೆಸ್‌ನವರು ಎಲ್ಲೋ ಎರಡು ಕಡೆ ಕ್ರಾಸ್ ಆಗಿ ಅಧಿಕಾರದಲ್ಲಿ ಇದ್ದಾರೆ. ಆ ಎರಡು ರಾಜ್ಯದಲ್ಲೂ ಯಾವಾಗ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಕೋಮಾ ಸ್ಥಿತಿಗೆ ಬಿದ್ದ ನುಗ್ಗೆ ಮರದಂತೆ. ಅವರು ಎಷ್ಟು ಕಾಲ ಇರುತ್ತಾರೆ ಎಂಬುದು ಗೊತ್ತಿಲ್ಲ. ಅವರಿಗೆ ತಾವು ಆಡಳಿತ ನಡೆಸುತ್ತಿರುವಂತೆ ತೋರುತ್ತಿದ್ರೂ, ನಿಜವಾಗಿ ಆ ಪಕ್ಷ ಈಗಿನ ದಿನಗಳಲ್ಲಿ ಯಾವುದೇ ಶಕ್ತಿ ಇಲ್ಲದಂತಹ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಸರ್ಕಾರ ಬೀಳೋ ಹಂತದಲ್ಲಿರುವ ನುಗ್ಗೆ ಮರ ಇದ್ದ ಹಾಗೆ. ಕಾಂಗ್ರೆಸ್‌ನವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ನಮ್ಮದು ಇಡೀ ಪ್ರಪಂಚದಲ್ಲಿರುವ ನಂಬರ್ ಒನ್ ಪಾರ್ಟಿ. ಕೋಮಾ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಾರ್ಟಿಯಿಂದ ಬುದ್ಧಿವಾದ ಕಲಿಯುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ಅನ್ನೋದು ಕಾಂಗ್ರೆಸ್ಸಿನ ದಿನ ನಿತ್ಯದ ಕಸುಬಾಗಿದೆ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಮೋದಿ ಜನೌಷಧಿ ತಂದು ಬಡವರಿಗೆ ಸಹಾಯ ಮಾಡಿದ್ರು. ಆದರೆ, ಈಗ ಅದಕ್ಕೆ ಎಳ್ಳು ನೀರು ಬಿಟ್ರು. ಮೂರನೇ ಬಾರಿ ಬಿಯರ್ ದರ ಏರಿಸಿದ್ದಾರೆ. ಸಿದ್ದರಾಮಯ್ಯ ನೋಡಿದ್ರೆ ಗಾಂಧಿ ಶ್ಲೋಕ ಹೇಳ್ತಾರೆ ಎಂದರು.
ಕಡಿಮೆ ದರ ಅಂತ ಜನ ಬಿಯರ್ ಕುಡಿಯುತ್ತಿದ್ರು. ರಾಜ್ಯದಲ್ಲಿ ಎಣ್ಣೆ ರೇಟ್ ಜಾಸ್ತಿ ಆದ ಮೇಲೆ ಕಳ್ಳತನ ಜಾಸ್ತಿಯಾಗಿದೆ. ಕಬ್ಬಿಣದ ಗೇಟ್‌ಗಳನ್ನೇ ಎತ್ಕೊಂಡು ಹೋಗಿ ಮಾರಿ ಕುಡಿತ ಇದ್ದಾರೆ. ರಾಜ್ಯದಲ್ಲಿ ಹುಟ್ಟಿದ್ರು ತೆರಿಗೆ, ಸತ್ರು ತೆರಿಗೆ. ಯಾವ ಪುರುಷಾರ್ಥಕ್ಕೆ ಎರಡು ವರ್ಷದ ಸಾಧನೆ ಎಂದು ಟೀಕಿಸಿ, ಈಗ ಸಂಭ್ರಮಾಚರಣೆ ಮಾಡ್ತಾ ಇರೋದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.















