ಮೈಸೂರು: ‘ಸ್ವಾಮೀಜಿಗಳೊಂದಿಗೆ ನಾನು ಎಂದಿಗೂ ಅಗೌರವದಿಂದ ನಡೆದುಕೊಂಡಿಲ್ಲ. ಮೊದಲಿನಿಂದಲೂ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ಅಪಾರ ಗೌರವವಿಟ್ಟುಕೊಂಡಿದ್ದು, ಅನೇಕ ಮಠಗಳಿಗೆ ಹೋಗಿ ಸ್ವಾಮೀಜಿಗಳನ್ನು ಮಾತನಾಡಿಸುತ್ತೇನೆ’ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಹಿಜಾಬ್ ವಿಚಾರವಾಗಿ ಪ್ರಶ್ನೆಯನ್ನೇ ಮಾಡಿಲ್ಲ. ಹಿಜಾಬ್ ಬೇರೆ, ದುಪ್ಪಟ್ಟಾ ಬೇರೆ. ಸಮವಸ್ತ್ರ ಜೊತೆಗೆ ಅದೇ ಬಣ್ಣದ ದುಪ್ಪಟ್ಟಾ ಹಾಕಿಕೊಂಡು ಪರೀಕ್ಷೆ ಬರೆಯಲು ಹೆಣ್ಣು ಮಕ್ಕಳಿಗೆ ಅವಕಾಶ ಮಾಡಿಕೊಡಿ ಎಂಬುದಾಗಿ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇನೆ ಅಷ್ಟೆ. ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನನ್ನ ಉದ್ದೇಶ. ಸಲಹೆ ಸ್ವೀಕರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.
ಮಾಧ್ಯಮದವರ ವಿರುದ್ಧ ಗರಂ ಆದ ಸಿದ್ದರಾಮಯ್ಯ , ಏನ್ ನೀವು ಆರ್‌ಎಸ್‌ಎಸ್‌ನವರ ರೀತಿ ವರ್ತಿಸುತ್ತೀರಿ, ನೀವೇ ಪ್ರಶ್ನೆ ಕೇಳಿ ಈಗ ವಿವಾದ ಹುಟ್ಟು ಹಾಕಿದ್ದೀರಿ ಎಂದರು.














