ಮನೆ ಪೌರಾಣಿಕ ಹನುಮಂತನ ಬಗೆಗಿನ ಈ 5 ಪೌರಾಣಿಕ ಕಥೆಗಳು

ಹನುಮಂತನ ಬಗೆಗಿನ ಈ 5 ಪೌರಾಣಿಕ ಕಥೆಗಳು

0

ವಾಲ್ಮೀಕಿ ರಾಮಾಯಣವನ್ನು ಹೊರತುಪಡಿಸಿ, ಆಂಜನೇಯ ಸ್ವಾಮಿಗೆ ಸಂಬಂಧಿಸಿದ ನೂರಾರು ಕಥೆಗಳ ವಿವರಣೆಯನ್ನು ಅನೇಕ ಪುಸ್ತಕಗಳಲ್ಲಿ ನೋಡಬಹುದು. ನಾವು ಹನುಮಂತನ ಬಾಲ್ಯದಿಂದ ಹಿಡಿದು ಆತನ ಅಮರತ್ವದವರೆಗೂ ನಾವು ಹಲವಾರು ಕಥೆಗಳನ್ನು ಓದಬಹುದು. ಹನುಮಂತನನ್ನು ಅಜರಾಮರ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಅವನು ಕಲಿಯುಗದಲ್ಲೂ ಅಸ್ಥಿತ್ವದಲ್ಲಿದ್ದಾನೆ. ಹನುಮಂತನನ್ನು ಕಲಿಯುಗದಲ್ಲಿ ಬಿಕ್ಕಟ್ಟನ್ನು ನಿವಾರಿಸುವವನೆಂದು ಹೇಳಲಾಗುತ್ತದೆ. ಅಪಾರ ಭಕ್ತಿಯಿಂದ ಹನುಮಂತನನ್ನು ಪೂಜಿಸುವುದರಿಂದ ನಾವು ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಎಂದಿಗೂ ಪ್ರಚಲಿತದಲ್ಲಿರುವ ಹನುಮಂತನ ಬಗೆಗಿನ 5 ಪೌರಾಣಿಕ ಕಥೆಗಳಾವುವು ಗೊತ್ತೇ..?

Join Our Whatsapp Group

ಚಾರೋ ಯುಗ ಪ್ರತಾಪ ತುಮ್ಹಾರ:

ಇದು ಹನುಮಾನ್ ಚಾಲೀಸಾದಲ್ಲಿ ಆಂಜನೇಯನ ಶಕ್ತಿಯನ್ನು ವಿವರಿಸಿದ ಬಗೆಯಾಗಿದೆ. ಲಂಕಾವನ್ನು ಗೆದ್ದು ಅಯೋಧ್ಯೆಗೆ ಹಿಂದಿರುಗಿದಾಗ, ಶ್ರೀರಾಮನು ವಿಭೀಷಣ, ಸುಗ್ರೀವ, ಅಂಗದ ಮುಂತಾದವರಿಗೆ ಕೃತಜ್ಞತೆಯ ಸಂಕೇತವಾಗಿ ಉಡುಗೊರೆಗಳನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ ಹನುಮಂತನು ಶ್ರೀರಾಮನನ್ನು ಹೀಗೆಂದು ಬೇಡಿಕೊಳ್ಳುತ್ತಾನೆ- “ಓ ವೀರ ಶ್ರೀರಾಮ.. ಎಲ್ಲಿಯವರೆಗೆ ನಿನ್ನ ಕಥೆ ಈ ಭೂಮಿಯ ಮೇಲೆ ಅಸ್ಥಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೂ ನನ್ನ ಆತ್ಮವು ಈ ದೇಹದಲ್ಲಿ ಇರಬೇಕೆಂದು ಕೇಳಿಕೊಳ್ಳುತ್ತಾನೆ.” ಆಗ ಶ್ರೀರಾಮನು ಹನುಮಂತನನ್ನು ಕುರಿತು ”ಓ ಕಪಿಶ್ರೇಷ್ಠ.. ನೀವು ಏನನ್ನು ಬಯಸುತ್ತೀರೋ ಅದು ಖಂಡಿತ ಆಗುತ್ತದೆ. ಅದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಎಲ್ಲಿಯವರೆಗೆ ನನ್ನ ಕಥೆಯು ಪ್ರಪಂಚದಲ್ಲಿ ಪ್ರಚಲಿತವಾಗಿದೆಯೋ ಅಲ್ಲಿಯವರೆಗೆ ನಿನ್ನ ಕೀರ್ತಿಯು ಮರೆಯಾಗದೆ ಉಳಿಯುತ್ತದೆ ಮತ್ತು ನಿನ್ನ ಜೀವವು ನಿನ್ನ ದೇಹದಲ್ಲಿ ಉಳಿಯುತ್ತದೆ. ಈ ಲೋಕಗಳು ಇರುವವರೆಗೂ ನನ್ನ ಕಥೆಗಳೂ ಸ್ಥಿರವಾಗಿರುತ್ತವೆ’ ಎಂದು ಆಶೀರ್ವಾದವನ್ನು ನೀಡುತ್ತಾನೆ.

ಎರಡು ಬಾರಿ ಸಂಜೀವಿನಿ ಪರ್ವತವನ್ನು ಎತ್ತಿದವನು:

ಬಾಲ್ಯದಲ್ಲಿ ಒಮ್ಮೆ ಹನುಮಂತನು ದೇವಗುರು ಬೃಹಸ್ಪತಿಯ ಮಾತಿಗೆ ಒಪ್ಪಿ ತನ್ನ ತಂದೆಗಾಗಿ ಸಮುದ್ರದಿಂದ ಸಂಜೀವಿನಿ ಪರ್ವತವನ್ನು ಎತ್ತಿದನು. ಹನುಮಂತನ ಈ ಅಘಾದ ಶಕ್ತಿಯನ್ನು ನೋಡಿ ಆತನ ತಾಯಿ ತುಂಬಾನೇ ಭಾವುಕಳಾಗುತ್ತಾಳೆ. ಇದಾದ ನಂತರ ರಾಮ ಮತ್ತು ರಾವಣ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ರಾವಣನ ಮಗ ಮೇಘನಾದನು ಬಳಸಿದ ಶಕ್ತಿಯುತ ಬಾಣಕ್ಕೆ ಲಕ್ಷ್ಮಣ ಸೇರಿದಂತೆ ವಾನರ ಸೇನೆಯು ಮೂರ್ಛೆ ಹೋಗುತ್ತಾರೆ. ಇವರನ್ನು ಉಳಿಸಲು ಸಂಜೀವಿನಿ ಮೂಲಿಕೆಯು ಬೇಕಾಗುತ್ತದೆ ಎಂದು ಜಾಂಬವಂತನು ಹೇಳಿದಾಗ ಹನುಮಂತನು ಈ ಮೂಲಕೆಯನ್ನು ಹುಡುಕಿಕೊಂಡು ದ್ರೋಣಾಚಲ ಪರ್ವತದತ್ತ ಹಾರುತ್ತಾನೆ. ಆದರೆ, ಪರ್ವತದಲ್ಲಿ ಸಂಜೀವಿನಿ ಮೂಲಿಕೆಯೊಂದಿಗೆ ಅನೇಕ ಇತರೆ ರೀತಿಯ ಗಿಡಗಳು ಇದ್ದುದ್ದರಿಂದ ಹನುಮನಿಗೆ ಸಂಜೀವಿನಿ ಮೂಲಿಕೆ ಹುಡುಕಲು ಕಷ್ಟವಾಗುತ್ತದೆ. ಆಗ ಹನುಮಂತನು ದ್ರೋಣಾಚಲ ಪರ್ವತದ ಒಂದು ಭಾಗವನ್ನು ಹೊತ್ತುಕೊಂಡು ಹೋಗುತ್ತಾನೆ.

ವಿಭೀಷಣ ಮತ್ತು ರಾಮನ ಭೇಟಿ:

ಒಮ್ಮೆ ಹನುಮಂತನು ಸೀತಾ ಮಾತೆಯನ್ನು ಹುಡುಕಿಕೊಂಡು ವಿಭೀಷಣನ ಅರಮನೆಗೆ ಹೋಗುತ್ತಾನೆ. ವಿಭೀಷಣನ ಅರಮನೆಯ ಮೇಲೆ ರಾಮನ ಚಿಹ್ನೆಯನ್ನು ಕೆತ್ತಿರುವುದನ್ನು ನೋಡಿ ಅವನಿಗೆ ಸಂತೋಷವಾಗುತ್ತದೆ. ಅಲ್ಲಿ ವಿಭೀಷಣನನ್ನು ಭೇಟಿಯಾಗುತ್ತಾನೆ. ವಿಭೀಷಣನು ಅವನ ಪರಿಚಯವನ್ನು ಕೇಳುತ್ತಾನೆ ಮತ್ತು ಅವನು ತನ್ನನ್ನು ರಘುನಾಥನ ಭಕ್ತ ಎಂದು ಪರಿಚಯಿಸಿಕೊಳ್ಳುತ್ತಾನೆ. ಹನುಮಂತ ಮತ್ತು ವಿಭೀಷಣ ಸುದೀರ್ಘ ಸಂಭಾಷಣೆ ನಡೆಸಿದ ನಂತರ ವಿಭೀಷಣನು ಉತ್ತಮನು ಎಂದು ಅರಿವಾಗುತ್ತದೆ.

ಇದಾದ ನಂತರ, ಶ್ರೀರಾಮನು ಲಂಕೆಯ ಮೇಲೆ ಆಕ್ರಮಣ ಮಾಡಲು ತಯಾರಿ ನಡೆಸುತ್ತಿರುವ ಸಮಯದಲ್ಲಿ, ವಿಭೀಷಣನು ರಾವಣನೊಂದಿಗೆ ವಿವಾದವನ್ನು ಹೊಂದುತ್ತಾನೆ, ಕೊನೆಯಲ್ಲಿ ವಿಭೀಷಣನು ಅರಮನೆಯನ್ನು ತೊರೆದು ರಾಮನನ್ನು ಭೇಟಿಯಾಗಲು ಉತ್ಸುಕನಾಗಿ ಸಾಗರದ ಈ ಕಡೆಗೆ ಬರುತ್ತಾನೆ. ವಿಭೀಷಣ ಬರುತ್ತಿರುವುದನ್ನು ಕಂಡ ವಾನರರು ಅವನನ್ನು ರಾವಣನ ಸಹೋದರನೆಂದು, ನಮಗೆ ಶತ್ರುವೆಂದು ಅವನಿಗೆ ರಾಮನನ್ನು ಭೇಟಿಯಾಗಲು ಬಿಡುವುದಿಲ್ಲ. ಇದನ್ನು ನೋಡಿದ ಹನುಮಂತನು ಬಂದು ವಾನರರನ್ನು ತಡೆಯುತ್ತಾನೆ ಮತ್ತು ವಿಭೀಷಣ ಹಾಗೂ ರಾಮನ ಭೇಟಿಗೆ ಸಹಾಯ ಮಾಡುತ್ತಾನೆ.

ರಾಮಾಯಣವನ್ನು ಮೊದಲು ಬರೆದವನು:

ಧರ್ಮಗ್ರಂಥಗಳ ಪ್ರಕಾರ, ಹನುಮಂತನು ರಾಮನ ಕಥೆಯನ್ನು ಬಂಡೆಯ ಮೇಲೆ ತನ್ನ ಉಗುರುಗಳಿಂದ ಬರೆದಿದ್ದಾನೆ ಎಂದು ಹೇಳಲಾಗಿದೆ. ಈ ರಾಮಕಥೆಯು ವಾಲ್ಮೀಕಿಯ ರಾಮಾಯಣಕ್ಕಿಂತ ಮುಂಚೆಯೇ ಬರೆಯಲ್ಪಟ್ಟಿದೆ ಮತ್ತು ಇದು ‘ಹನುಮದ್ ರಾಮಾಯಣ’ ಎಂದು ಪ್ರಸಿದ್ಧವಾಗಿದೆ. ರಾವಣನ ಮೇಲೆ ವಿಜಯವನ್ನು ಪಡೆದ ನಂತರ ಭಗವಾನ್ ಶ್ರೀರಾಮ ಅಯೋಧ್ಯೆಯಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದಾಗ ಮತ್ತು ಹನುಮಂತನು ಹಿಮಾಲಯಕ್ಕೆ ಹೋದಾಗ ಈ ಘಟನೆ ಸಂಭವಿಸಿತು. ಅಲ್ಲಿ ಹನುಮಂತನು ಶಿವನ ಕುರಿತು ತಪಸ್ಸನ್ನು ಮಾಡುವ ಸಮಯದಲ್ಲಿ ಬಂಡೆಯ ಮೇಲೆ ಪ್ರತಿನಿತ್ಯ ತನ್ನ ಉಗುರುಗಳಿಂದ ರಾಮನ ಕಥೆಯನ್ನು ಬರೆಯುತ್ತಿದ್ದನು.

ಕೆಲ ಸಮಯಗಳ ಬಳಿಕೆ ಮಹರ್ಷಿ ವಾಲ್ಮೀಕಿಯು ಕೂಡ ವಾಲ್ಮೀಕಿ ರಾಮಾಯಣವನ್ನು ಬರೆದು ಅದನ್ನು ಮೊದಲು ಶಿವನಿಗೆ ಅರ್ಪಿಸಬೇಕೆಂದು ಶಿವನ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ಬರುತ್ತಾರೆ. ಅಲ್ಲಿ ಅವರು ಹನುಮಂತನು ಬರೆದ ಹನುಮದ್ ರಾಮಾಯಣವನ್ನು ನೋಡಿ ನಿರಾಸೆಗೊಂಡು ಹಿಂದಕ್ಕೆ ಬರುತ್ತಾರೆ. ಮಾರ್ಗದಲ್ಲಿ ಹನುಮಂತನು ವಾಲ್ಮೀಕಿ ಮಹರ್ಷಿಗಳು ಬೇಸರಗೊಂಡಿರುವುದನ್ನು ನೋಡಿ ಅವರ ಬೇಸರಕ್ಕೆ ಕಾರಣವನ್ನು ತಿಳಿದುಕೊಳ್ಳುತ್ತಾನೆ. ನಂತರ ಅವನು ತನ್ನ ಒಂದು ಭುಜದ ಮೇಲೆ ಹನುಮದ್ ರಾಮಾಯಣದ ಬಂಡೆಯನ್ನು ಮತ್ತು ಇನ್ನೊಂದು ಭುಜದ ಮೇಲೆ ವಾಲ್ಮೀಕಿ ಮಹರ್ಷಿಗಳನ್ನು ಕೂರಿಸಿಕೊಂಡು ಸಮುದ್ರದತ್ತ ಜಿಗಿದು ತನ್ನ ರಾಮಾಯಣವನ್ನು ಶ್ರೀರಾಮನಿಗೆ ಅರ್ಪಿಸಿ ನಂತರ ಸಮುದ್ರಕ್ಕೆ ಎಸೆಯುತ್ತಾನೆ. ಅಂದಿನಿಂದ ಹನುಮನು ಬರೆದ ಹನುಮದ್ ರಾಮಾಯಣ ಯಾರಿಗೂ ಸಿಗಲಿಲ್ಲ.

ಹನುಮಂತ ಮತ್ತು ಅರ್ಜುನ:

ಮಹಾಭಾರತ ಯುದ್ಧದಲ್ಲಿ ಪಾಂಡವರ ಗೆಲುವಿಗೆ ಹನುಮಂತನೂ ಕಾರಣ ಎಂದು ಹೇಳಲಾಗುತ್ತದೆ. ಆನಂದ ರಾಮಾಯಣದಲ್ಲಿ ಮಹಾಭಾರತ ಯುದ್ಧದ ಸಮಯದಲ್ಲಿ ಹನುಮಂತನು ಅರ್ಜುನನ ರಥದ ಮೇಲೆ ಕುಳಿತಿರುವ ಉಲ್ಲೇಖವಿದೆ. ಒಮ್ಮೆ ರಾಮೇಶ್ವರಂ ತೀರ್ಥಯಾತ್ರೆಯಲ್ಲಿ ಅರ್ಜುನನು ಹನುಮಂತನನ್ನು ಭೇಟಿಯಾಗುತ್ತಾನೆ. ಈ ಸಂದರ್ಭದಲ್ಲಿ ಅರ್ಜುನನು ಹನುಮಂತನನ್ನು ಕುರಿತು ಸ್ವಾಮಿ ನೀವು ರಾಮ ಮತ್ತು ರಾವಣನ ಯುದ್ಧದಲ್ಲಿ ರಾಮನ ಜೊತೆ ಇದ್ದಿರುವುದಕ್ಕೆ ರಾಮನ ಸೇನೆ ವಿಜಯವನ್ನು ಸಾಧಿಸಿತು. ಹಾಗೇ.. ಇದೀಗ ನೀವು ಮಹಾಭಾರತ ಯುದ್ಧದಲ್ಲಿ ನನ್ನೊಂದಿಗಿದ್ದು ನನ್ನ ವಿಜಯಕ್ಕೆ ಕಾರಣರಾಗಬೇಕೆಂದು ಬೇಡಿಕೊಳ್ಳುತ್ತಾನೆ. ಇದಕ್ಕಾಗಿ ಹನುಮಂತನು ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಸಹಾಯ ಮಾಡುತ್ತಾನೆ.