ಇಂದು (ಅಕ್ಟೋಬರ್ 02) ಮಹಾತ್ಮಾ ಗಾಂಧಿ ಜಯಂತಿ. ವಿಶ್ವವೇ ತಲೆಬಾಗಿ ನಮಿಸುವ ಭಾರತೀಯ ವ್ಯಕ್ತಿ ಮಹಾತ್ಮಾ ಗಾಂಧಿ. ಮಹಾತ್ಮಾ ಗಾಂಧಿಯ ಬಗ್ಗೆ ಸಾವಿರಾರು ಪುಸ್ತಕಗಳು ಪ್ರಕಟಗೊಂಡಿವೆ. ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಮಹಾತ್ಮಾ ಗಾಂಧಿಯವರ ಹೆಸರಿದೆ. ಇಡೀ ವಿಶ್ವಕ್ಕೆ ಶಾಂತಿಯ ಮಂತ್ರ ನೀಡಿದವರು ಮಹಾತ್ಮಾ ಗಾಂಧಿ. ಇಂಥಹಾ ಮಹಾನ್ ಚೇತನದ ಬಗ್ಗೆ ಭಾರತದ ಯುವಜನತೆಗೆ ಅರಿವಿಲ್ಲ. ಇಂದು ಮಹಾತ್ಮಾ ಗಾಂಧಿ ಜಯಂತಿಯಾಗಿದ್ದು, ಅವರ ಬಗ್ಗೆ ನಿರ್ಮಾಣವಾಗಿರುವ ಕೆಲ ಅದ್ಭುತ ಸಿನಿಮಾಗಳ ಪಟ್ಟಿ ಇಲ್ಲಿದೆ.
‘ಗಾಂಧಿ’
ಮಹಾತ್ಮಾ ಗಾಂಧಿ ಕುರಿತಾದ ಸಿನಿಮಾ ಎಂದೊಡನೆ ನೆನಪಿಗೆ ಬರುವುದು ಸರ್ ರಿಚರ್ಡ್ ಅಟೆನ್ ಬರ್ರೊ ನಿರ್ದೇಶನ ಮಾಡಿರುವ ‘ಗಾಂಧಿ’ ಸಿನಿಮಾ. ಖ್ಯಾತ ನಟ ಬೆನ್ ಕಿಂಗ್ಸ್ಲಿ ಮಹಾತ್ಮಾ ಗಾಂಧಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾಕ್ಕೆ ಆಸ್ಕರ್ ಲಭಿಸಿತ್ತು. ಸಿನಿಮಾ ಬಿಡುಗಡೆ ಆಗಿದ್ದು 1982 ರಲ್ಲಿ, ಗಾಂಧಿ ಅವರ ಕುರಿತಾಗಿ ನಿರ್ಮಾಣವಾಗಿರುವ ಅತ್ಯುತ್ತಮ ಸಿನಿಮಾ ಇದೆನ್ನಬಹುದು.
‘ಮೇಕಿಂಗ್ ಆಫ್ ಮಹಾತ್ಮಾ’
ಮೇಕಿಂಗ್ ಆಫ್ ಮಹಾತ್ಮಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ನಿರ್ದೇಶಿಸಿದ್ದಾರೆ. ಮಹಾತ್ಮಾ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟ ಎಲ್ಲರಿಗೂ ಗೊತ್ತು, ಆದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ಮಾಡಿದ ಹೋರಾಟದ ಬಗ್ಗೆ ಕಡಿಮೆ ಜನರಿಗೆ ಅರಿವಿಗೆ, ಮಹಾತ್ಮಾ ಅವರ ದಕ್ಷಿಣ ಭಾರತದ ದಿನಗಳನ್ನು ಕಟ್ಟಿಕೊಟ್ಟ ಸಿನಿಮಾ ಇದು.
‘ಗಾಂಧಿ ಮೈ ಫಾದರ್’
ಮಹಾತ್ಮಾ ಗಾಂಧಿಯನ್ನು ಮಹಾತ್ಮನಂತೆ ಅಲ್ಲದೆ ಒಬ್ಬ ತಂದೆಯನ್ನಾಗಿ ನೋಡಿ ಅಳೆದ ಸಿನಿಮಾ ಇದು. ‘ಗಾಂಧಿ ಮೈ ಫಾದರ್’ ಸಿನಿಮಾ ಮಹಾತ್ಮಾ ಗಾಂಧಿಯ ಪುತ್ರ ದೃಷ್ಟಿಕೋನದ ಕತೆ ಹೊಂದಿರುವ ಸಿನಿಮಾ. ಭಾರತದ ಅತ್ಯುತ್ತಮ ಜಿಜ್ಞಾಸು ಸಿನಿಮಾಗಳಲ್ಲಿ ಇದೂ ಸಹ ಒಂದು. ಮಹಾತ್ಮ ಎನಿಸಿಕೊಂಡರೂ ಸಹ ಗಾಂಧಿ ತಂದೆಯಾಗಿ ಹೇಗೆ ಸೋತರು ಎಂಬುದನ್ನು ಈ ಸಿನಿಮಾ ತೋರಿಸುತ್ತದೆ.
‘ನೈನ್ ಹವರ್ಸ್ ಟು ರಾಮ’
ಇದೊಂದು ಭಿನ್ನವಾದ ಪ್ರಯತ್ನ. ಮಹಾತ್ಮಾ ಗಾಂಧಿಯ ಕೊಲೆ ಆಗುವ ಒಂಬತ್ತು ಗಂಟೆ ಮುಂಚೆ ನಡೆದ ಘಟನೆಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಮಾರ್ಕ್ ರೋಬ್ಸನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಯಾವೊಬ್ಬ ಭಾರತೀಯ ನಟನೂ ಇಲ್ಲ, ಎಲ್ಲ ಪಾತ್ರಗಳಲ್ಲಿಯೂ ವಿದೇಶಿ ನಟರೇ ಇದ್ದಾರೆ. ಸಿನಿಮಾ 1963 ರಲ್ಲಿ ಬಿಡುಗಡೆ ಆಗಿತ್ತು.
‘ಲಗೆ ರಹೋ ಮುನ್ನಾಭಾಯಿ’
ಇದು ಕಮರ್ಶಿಯಲ್ ಸಿನಿಮಾ ಆಗಿದ್ದರೂ ಸಹ ಗಾಂಧಿಯವರ ಮಹತ್ವವನ್ನು ಯುವಜನರಿಗೆ ಇಷ್ಟವಾಗುವ ರೀತಿಯಲ್ಲಿಯೇ ಅವರಿಗೆ ತಿಳಿಸಿಕೊಟ್ಟ ಸಿನಿಮಾ ಎನ್ನಬಹುದು. ರಾಜ್ಕುಮಾರ್ ಹಿರಾನಿ ನಿರ್ದೇಶಿಸಿ ಸಂಜಯ್ ದತ್ ನಟಿಸಿರುವ ಈ ಸಿನಿಮಾ ಮಹಾತ್ಮಾ ಗಾಂಧಿಯ ಮಹತ್ವವನ್ನು ಲಘು ದಾಟಿಯಲ್ಲಿ ಸಾರುವ ಸಿನಿಮಾ.
‘ಹೇ ರಾಮ್’
ಕಮಲ್ ಹಾಸನ್ ನಿರ್ದೇಶನದ ‘ಹೇ ರಾಮ್’ ಸಂಪೂರ್ಣವಾಗಿ ಮಹಾತ್ಮಾ ಗಾಂಧಿ ಕುರಿತಾದ ಸಿನಿಮಾ ಅಲ್ಲ. ಗಾಂಧಿಯನ್ನು ಕೊಲ್ಲಲು ಹೊರಡುವ ವ್ಯಕ್ತಿಯೊಬ್ಬನ ಮನಸ್ಸು ಹೇಗೆ ಪರಿವರ್ತನೆಗೊಳ್ಳುತ್ತದೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ಸ್ವಾತಂತ್ರ್ಯ, ವಿಭಜನೆ, ಧರ್ಮ ಇನ್ನಿತರೆ ವಿಷಯಗಳ ಚರ್ಚೆಯಾಗಿದೆ. ಕಮಲ್ ಹಾಸನ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಸಹ ಇದ್ದಾರೆ.
‘ಕೂರ್ಮಾವತಾರ’
ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ ಸಿನಿಮಾ ಕನ್ನಡದಲ್ಲಿ ಬಂದ ಗಾಂಧಿ ಕುರಿತಾದ ಉತ್ತಮ ಸಿನಿಮಾ. ನಾಟಕವೊಂದರಲ್ಲಿ ಗಾಂಧಿ ಪಾತ್ರ ಮಾಡುವ ವ್ಯಕ್ತಿ ಹಾಗೂ ಆತನ ತಾಕಲಾಟಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಗಾಂಧಿಯ ಆದರ್ಶ ಹಾಗೂ ಪ್ರಸ್ತುತ ಸನ್ನಿವೇಶದ ನಡುವಿನ ತಿಕ್ಕಾಟವನ್ನು ಈ ಸಿನಿಮಾದಲ್ಲಿ ಚರ್ಚಿಸಲಾಗಿದೆ.