ಉಸಿರಾಟ ದೇಹದ ಒಂದು ಅತ್ಯಮೂಲ್ಯ ಕಾರ್ಯ. ಉಸಿರಾಟ ಸರಿಯಾಗಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇದಕ್ಕೆ ಮುಖ್ಯವಾಗಿ ಶ್ವಾಸಕೋಶ ಆರೊಗ್ಯವಾಗಿರಬೇಕು.
ಇಲ್ಲವಾದರೆ ದಮ್ಮು, ಉಸಿರುಕಟ್ಟುವಿಕೆ, ಅಸ್ತಮಾದಂತಹ ಕಾಯಿಲೆಗಳು ಕಾಡುತ್ತವೆ.
ಹೀಗಾಗಿ ಶ್ವಾಸಕೋಶವನ್ನು ಆರೋಗ್ಯವಾಗಿರಿಸಿಕೊಳ್ಳಲು ಆಯುರ್ವೇದ ಪದ್ಧತಿ ಒಂದಷ್ಟು ಮೂಲಿಕೆಗಳನ್ನು ಬಳಸಲು ಶಿಫಾರಸ್ಸು ಮಾಡುತ್ತದೆ.
ಹಿಪ್ಪಲಿ/ ಪಿಪ್ಪಲಿ
ಪಿಪ್ಪಲಿ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಆಯುರ್ವೇದದ ಪ್ರಕಾರ, ಪಿಪ್ಪಲಿಯನ್ನು ಹಾಲಿನೊಂದಿಗೆ ಸೇವಿಸಬೇಕು. 15 ದಿನಗಳವರೆಗೆ ಒಂದೊಂದು ಪಿಪ್ಪಲಿಯನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಪಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಬಳಸುವುದರಿಂದ ಶೀತ ಮತ್ತು ಕೆಮ್ಮಿನಂತಹ ಅನೇಕ ಉಸಿರಾಟದ ತೊಂದರೆಗಳು ಗುಣವಾಗುತ್ತವೆ. ಅಲ್ಲದೆ ಶ್ವಾಸಕೋಶದಲ್ಲಿ ಕಫ ಕಟ್ಟಿದ್ದರೆ ಅದನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಒಣ ಶುಂಠಿ
ಒಣ ಶುಂಠಿ ಇದು ಶ್ವಾಸಕೋಶದಲ್ಲಿ ಸೋಂಕಿನಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಒಣ ಶುಂಠಿಯು ಉಸಿರಾಟದ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಉಸಿರಾಟದ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.
ಗಂಟಲಿನ ಊತವನ್ನು ಕಡಿಮೆ ಮಾಡುವ ಮೂಲಕ ಗಂಟಲು ನೋವು ಮತ್ತು ಕೆಮ್ಮಿಗೆ ಪರಿಹಾರವನ್ನು ನೀಡುತ್ತದೆ. ಒಣ ಶುಂಠಿಯು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸೋಂಕನ್ನು ದೂರವಿರಿಸಲು ಸಹಾಯ ಮಾಡುತ್ತದೆ.
ತ್ರಿಫಲ
ತ್ರಿಫಲ ಒಣ ಕೆಮ್ಮು, ನೆಗಡಿ ಮತ್ತು ಗಂಟಲು ನೋವಿಗೆ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ, ತ್ರಿಫಲ ಎಲ್ಲಾ ರೀತಿಯ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ರೋಗಗಳಿಗೆ ಪರಿಹಾರ ನೀಡುತ್ತದೆ.
ಇದು ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿದ ಕಫವನ್ನು ತೆಗೆದುಹಾಕುತ್ತದೆ ಮತ್ತು ಶ್ವಾಸನಾಳದ ಕಾಯಿಲೆಗಳಲ್ಲಿ ಪರಿಹಾರವನ್ನು ನೀಡುತ್ತದೆ.
ಜ್ಯೇಷ್ಟ ಮಧು
ಆಯುರ್ವೇದದ ಪ್ರಕಾರ, ಅದರ ಸಿಹಿ ಮತ್ತು ತಂಪನೆಯ ಗುಣಲಕ್ಷಣಗಳಿಂದಾಗಿ ಜ್ಯೇಷ್ಟ ಮಧು ಶ್ವಾಸನಾಳದ ಸೋಂಕಿನಲ್ಲಿ ಉತ್ತಮ ಪರಿಹಾರವನ್ನು ನೀಡುತ್ತದೆ. ಶೀತ ಮತ್ತು ಕೆಮ್ಮು ಮುಂತಾದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಜ್ಯೇಷ್ಟ ಮಧುವನ್ನು ಬಳಸಲಾಗುತ್ತದೆ.
ಜ್ಯೇಷ್ಟ ಮಧು ಶ್ವಾಸಕೋಶ ಮತ್ತು ಗಂಟಲಿನಲ್ಲಿ ಸಂಗ್ರಹವಾಗುವ ದಪ್ಪ ಲೋಳೆಯನ್ನು ಕರಗಿಸಿ ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ ಗಂಟಲು ನೋವು ಮತ್ತು ಕೆಮ್ಮಿಗೆ ಪರಿಹಾರ ನೀಡುತ್ತದೆ
ತುಳಸಿ
ತುಳಸಿಯ ಬಳಕೆಯು ಅನೇಕ ಉಸಿರಾಟದ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ. ಯುಜೆನಾಲ್ ಎನ್ನುವ ಅಂಶ ತುಳಸಿ ಎಲೆಗಳಲ್ಲಿ ಕಂಡುಬರುತ್ತದೆ, ಇದು ಉಸಿರಾಟದ ವ್ಯವಸ್ಥೆಯಲ್ಲಿ ಶೀತ, ಕೆಮ್ಮು ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ. ಅಲ್ಲದೆ ಉಸಿರಾಟದ ಸೋಂಕುಗಳು ಮತ್ತು ಇತರ ಶ್ವಾಸಕೋಶದ ಕಾಯಿಲೆಗಳಿಂದ ದೂರವಿರಬಹುದು.
ಉಸಿರಾಟದ ಪ್ರಾಣಾಯಾಮಗಳೂ ಸಹಕಾರಿ
ಶ್ವಾಸಕೋಶ ಆರೋಗ್ಯವಾಗಿರಲು ಉಸಿರಾಟದ ಪ್ರಾಣಾಯಾಮಗಳು ಸಹಾಯ ಮಾಡುತ್ತದೆ. ದಿನನಿತ್ಯ ಇದನ್ನು ಮಾಡುವುದರಿಂದ ಉಸಿರಾಟದ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಅಸ್ತಮಾದಂತಹ ಸಮಸ್ಯೆಗಳಿಗೆ ಪ್ರಾಣಾಯಾಮ ಅಭ್ಯಾಸ ಉತ್ತಮ ಮದ್ದಾಗಿದೆ.
ಅನುಲೋಮ-ವಿಲೋಮ ಪ್ರಾಣಾಯಾಮಗಳಾದ ಭ್ರಮರಿ, ಕಪಾಲಭಾತಿ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸಲು ಪ್ರಯೋಜನಕಾರಿ. ದಿನನಿತ್ಯದ ಆಹಾರದಲ್ಲಿ ಮೊಸರನ್ನು ಸೇವಿಸದಿರುವುದು, ತಂಪು ಆಹಾರಗಳನ್ನು ತ್ಯಜಿಸುವುದರಿಂದ ಉಸಿರಾಟದ ಸಮಸ್ಯೆಗಳಿಂದ ದೂರವಿರಬಹುದಾಗಿದೆ.