ಮನೆ ರಾಜ್ಯ ಹಿರಿಯ ಚಿಂತಕ ಜಿ.ರಾಜಶೇಖರ್‌ ನಿಧನ

ಹಿರಿಯ ಚಿಂತಕ ಜಿ.ರಾಜಶೇಖರ್‌ ನಿಧನ

0

ಉಡುಪಿ (Udupi): ನಾಡಿನ ಖ್ಯಾತ ಲೇಖಕ, ವಿಮರ್ಶಕ ಹಾಗೂ ಹೋರಾಟಗಾರ ಜಿ. ರಾಜಶೇಖರ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.

ರಾಜಶೇಖರ್‌ ಅವರು ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಕಾಯಿಲೆ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಚಿಕಿತ್ಸೆಗಾಗಿ ನಗರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವಿಮರ್ಶಕ ರಾಜಶೇಖರ್ ಅವರು ಉಡುಪಿಯ ಕೊಳಂಬೆಯ ಗ್ರಾಮದ ನಿವಾಸಿಯಾಗಿದ್ದು, ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಜಿ.ರಾಜಶೇಖರ 2019ರಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಬಿದ್ದಿತ್ತು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆ ಇರುವುದು ದೃಢಪಟ್ಟಿತ್ತು. ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಂತ ಹಂತವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದರು. ದೇಹದ ಭಾಗಗಳು ಸ್ವನಿಯಂತ್ರಣ ಕಳೆದುಕೊಂಡಿದ್ದವು. ಮಾತನಾಡಲು ಹಾಗೂ ನಡೆದಾಡಲು ಸಾದ್ಯವಾಗದ ಸ್ಥಿತಿ ತಲುಪಿದ ಬಳಿಕ ಸಾರ್ವಜನಿಕ ಸಭೆ, ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರು. ಕೊನೆಗೆ ನಡೆಯಲೂ ಸಾಧ್ಯವಾಗದೆ ಹಾಗೂ ಆಹಾರ ನುಂಗಲಾಗದೆ ದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದಿದ್ದಾರೆ.

ರಾಜಶೇಖರ್ ಅವರು ನೊಂದವರ ಹಾಗೂ ಕೋಮುವಾದದ ವಿರುದ್ಧ ಸಾಕಷ್ಟು ಜನರಿಗೆ ಧ್ವನಿಯಾಗಿದ್ದಲ್ಲದೆ ಹೋರಾಟಗಳಲ್ಲಿ ಸದಾ ಮುಂದಿರುತ್ತಿದ್ದರು. ಕರಾವಳಿಯ ಕೋಮುವಾದದ ವಿರುದ್ಧ ಗಟ್ಟಿಯಾಗಿ ಧನಿ ಎತ್ತುತ್ತಿದ್ದರು. ತಮ್ಮ ನೇರ ಮಾತು ಹಾಗೂ ವಿಶ್ಲೇಷಣೆಗಳಿಂದಲೇ ಎಲ್ಲೆಡೆ ಹೆಸರುವಾಸಿಯಾಗಿದ್ದರು.

ಜಿ.ರಾಜಶೇಖರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಹತ್ತು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.