ಪಾರಿಜಾತ ಹೂವುಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇದನ್ನು ದೇವರ ಪೂಜೆಗೆ ಮಾತ್ರವಲ್ಲದೆ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಬಳಕೆ ಮಾಡಲಾಗುತ್ತದೆ. ಈ ಮರದಿಂದ ಹಲವಾರು ಪ್ರಯೋಜನಗಳಿದ್ದು ಆಯುರ್ವೇದ ಔಷಧೀಯ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇವುಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಆದರೆ ಪಾರಿಜಾತ ಮರದ ಎಲೆ ಮತ್ತು ಹೂವುಗಳಲ್ಲಿರುವ ಅನೇಕ ಔಷಧೀಯ ಗುಣಗಳಿದ್ದು ವಿವಿಧ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ನಿಮ್ಮ ಮನೆಯಲ್ಲಿಯೂ ಪಾರಿಜಾತ ಮರವಿದ್ದು ಅದರ ಉಪಯೋಗದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಅಥವಾ ಈ ಹೂವುಗಳನ್ನು ತಂದಾಗ ದೇವರ ಪೂಜೆಗೆ ಬಳಕೆ ಮಾಡುವುದರ ಜೊತೆಗೆ ಅವುಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿದ್ದರೆ ಈ ಹೂವುಗಳಿಂದ ಸಿಗುವ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಈ ಹೂವು ಯಾರಿಗೆ ಒಳ್ಳೆಯದು, ಹೇಗೆ ಬಳಕೆ ಮಾಡಬೇಕು ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.
ಸಂಧಿವಾತದಿಂದ ಮುಕ್ತಿ ಪಡೆಯಲು – ಪಾರಿಜಾತ ಔಷಧೀಯ ಗುಣಗಳಿರುವ ಮರಗಳಲ್ಲಿ ಒಂದಾಗಿದ್ದು ಇದರ ಪ್ರತಿಯೊಂದು ಭಾಗವೂ ಕೂಡ ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಹೂವುಗಳು ಆರೋಗ್ಯಕ್ಕೆ ಉಪಯುಕ್ತವಾದ ಅನೇಕ ಔಷಧೀಯ ಗುಣಗಳಿಂದ ಸಮೃದ್ದವಾಗಿದ್ದು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ವಿಶೇಷವಾಗಿ ವಾತ ಮತ್ತು ಕಫದ ಅಸಮತೋಲನ ಇದ್ದಾಗ, ಸಂಧಿವಾತದ ಅಪಾಯ ಹೆಚ್ಚಾಗುತ್ತದೆ. ಈ ರೀತಿ ಸಮಸ್ಯೆ ಇರುವವರಿಗೆ ಪಾರಿಜಾತದ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಇದರ ಎಲೆಗಳನ್ನು ಕೂಡ ಇದಕ್ಕೆ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಹೇಗೆಂದರೆ, ಮೊದಲು ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಲಾಗುತ್ತದೆ. ನಂತರ ಅದನ್ನು ರೋಗಿಗೆ ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಮಾತ್ರವಲ್ಲ, ಈ ಪಾರಿಜಾತ ಎಲೆಗಳಿಂದ ಪೇಸ್ಟ್ ತಯಾರಿಸಿ ಅದನ್ನು ಮೊಣಕಾಲು ಮತ್ತು ಕೀಲು ನೋವಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ – ಪಾರಿಜಾತ ಎಲೆ ಮತ್ತು ಹೂವುಗಳು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.ಈ ಪರಿಮಳಯುಕ್ತ ಬಿಳಿ ಹೂವು ದೇಹವನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಜೊತೆಗೆ ಇವುಗಳಲ್ಲಿ ವಿಟಮಿನ್ ಸಿ ಅಂಶವೂ ಸಮೃದ್ಧವಾಗಿದ್ದು, ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹೆಚ್ಚುವರಿಯಾಗಿ, ಪಾರಿಜಾತ ಎಲೆಗಳನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಬಳಕೆ ಮಾಡಲಾಗುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ – ಪಾರಿಜಾತ ಹೂವುಗಳ ಸುವಾಸನೆ ನಿಮ್ಮ ಒತ್ತಡವನ್ನು ಕ್ಷಣಗಳಲ್ಲಿ ಕಡಿಮೆ ಮಾಡಲು ಸಹಾಯ ಮಾಡವುತ್ತದೆ. ಇದಲ್ಲದೆ, ಅದರ ಪರಿಮಳವು ಮನೆಯ ತುಂಬಾ ಹರಡುವುದರಿಂದ ಸಕಾರಾತ್ಮಕ ಶಕ್ತಿ ಸಿಗುತ್ತದೆ. ಮಾತ್ರವಲ್ಲ ಈ ಸಸ್ಯ ಇರುವ ಸುತ್ತಮುತ್ತ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದ್ದು ಇದರ ಪ್ರಭಾವವು ಕುಟುಂಬದ ಎಲ್ಲ ಸದಸ್ಯರ ಆರೋಗ್ಯವನ್ನು ಸುಧಾರಿಸುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ಇದು ದೀರ್ಘಾಯುಷ್ಯವನ್ನು ಸಹ ತರುತ್ತದೆ ಎಂದು ಹೇಳಲಾಗುತ್ತದೆ.















