ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ರವಿವಾರ ನಡೆದ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ವಿರುದ್ಧ ಅಧಿಕಾರಯುತ ಜಯ ಸಾಧಿಸಿ ಮೊದಲ ಬಾರಿ ಕಪ್ ಗೆದ್ದು ಐಪಿಎಲ್ ಆರಂಭಕ್ಕೂ ಮುನ್ನ ಆರ್ ಸಿಬಿ ತಂಡಕ್ಕೆ ಹೊಸ ಉತ್ಸಾಹದ ಮಾರ್ಗ ತೋರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಿಗಿ ದಾಳಿ ನಡೆಸಿದ ಆರ್ ಸಿಬಿ ವನಿತೆಯರು ಘಾತಕವಾಗಿ ಕಾಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 113 ರನ್ ಗಳಿಗೆ ಆಲೌಟ್ ಮಾಡಿದರು.
ಗುರಿ ಬೆನ್ನಟ್ಟಿದ ಸ್ಮೃತಿ ಮಂಧಾನ ಬಳಗ 19.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ(115) ತಲುಪಿ ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸ್ಮೃತಿ ಮಂಧಾನ 31 ರನ್ , ಸೋಫಿ ಡಿವೈನ್ 32 ರನ್ ಗಳಿಸಿ ಔಟಾದರು. ಆ ಬಳಿಕ ಎಲ್ಲಿಸ್ ಪೆರ್ರಿ(35*) ರಿಚಾ ಘೋಷ್(17*) ಗೆಲುವಿನತ್ತ ಕೊಂಡೊಯ್ದರು.
ಡೆಲ್ಲಿಯ ಆರಂಭಿಕ ಜೋಡಿ ಮೊದಲ 7 ಓವರ್ ಗಳಲ್ಲಿ 64 ಉತ್ತಮ ಜತೆಯಾಟವಾಡಿದರಾದರೂ ತಂಡ ಕುಸಿದು ಹೋಯಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 23, ಶಫಾಲಿ ವರ್ಮ 44 ರನ್ ಗಳಿಸಿದರು. ರಾಧಾ ಯಾದವ್ 12 ಮತ್ತು ಅರುಂಧತಿ ರೆಡ್ಡಿ 10 ರನ್ ಹೊರತು ಪಡಿಸಿ ಉಳಿದ ಆಟಗಾರ್ತಿಯರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು.
ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಬಾರಿಗೆ ನೇರವಾಗಿ ಫೈನಲ್ ಗೇರಿದ ಸಾಧನೆ ಮಾಡಿತ್ತು. ಶುಕ್ರವಾರದ ಎಲಿಮಿನೇಟರ್ ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ರೋಚಕ 5 ರನ್‌ಗಳ ಗೆಲುವನ್ನಾಚರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.