ವಾಲ್ ಸಿಟ್ ವ್ಯಾಯಾಮ ಮಾಡಲು ಜಿಮ್ ಗೆ ಹೋಗುವ ಅಗತ್ಯವಿಲ್ಲ. ಸಾವಿರ ಸಾವಿರ ಶುಲ್ಕ ಕಟ್ಟಬೇಕಿಲ್ಲ. ಇದನ್ನು ಮನೆಯಲ್ಲೇ ಮಾಡಬಹುದು. ಒಂದು ಕುರ್ಚಿಯನ್ನು ಗೋಡೆಗೆ ಒರಗಿಸಿ ಇಟ್ಟಾಗ ಹೇಗೆ ಕಾಣುತ್ತದೋ, ನಿಮ್ಮ ದೇಹ ಕೂಡಾ ಹಾಗೇ ಇರಬೇಕು.
ಸ್ಕೂಲ್ ನಲ್ಲಿದ್ದಾಗ ನಾವು ಏನಾದರೂ ತಪ್ಪು ಮಾಡಿದರೆ, ಟೀಚರ್ ಗಳು ನಮಗೆ ವಾಲ್ ಸಿಟ್ ಶಿಕ್ಷೆ ನೀಡುತ್ತಿದ್ದರು. ಬಹಳ ಹೊತ್ತು ಹಾಗೆ ವಾಲ್ ಸಿಟ್ ಮಾಡಿದಾಗ ಕೈ ಕಾಲುಗಳು ಬಹಳಷ್ಟು ನೋವು ಬರುತ್ತಿತ್ತು. ಆಗ ಇನ್ಮುಂದೆ ನಾನು ಇಂತಹ ತಪ್ಪು ಮಾಡಬಾರದು ಎಂದುಕೊಳ್ಳುತ್ತಿದ್ದವರೇ ಹೆಚ್ಚು. ಆದರೆ ಈ ರೀತಿ ವಾಲ್ ಸಿಟ್ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ.
ನಿಮ್ಮ ಬೆನ್ನನ್ನು ಗೋಡೆಗೆ ಒರಗಿಸಿ, ಗೋಡೆಯ ಸಪೋರ್ಟ್ ನಿಂದ ಕುರ್ಚಿಯಂತೆ ಕೂರಲು ಯತ್ನಿಸಿ. ಮೊಣಕಾಲುಗಳಿಂದ ಪಾದದವರೆಗೆ ಕಾಲುಗಳನ್ನು ನೇರವಾಗಿ ಇರಿಸಿ. ದೇಹದ ಮಧ್ಯಭಾಗವು ಮೊಣಕಾಲುಗಳಿಂದ ಪೃಷ್ಠದವರೆಗೆ ನೆಲಕ್ಕೆ ಸಮಾನಾಂತರವಾಗಿರಬೇಕು ಮತ್ತು ದೇಹದ ಮೇಲಿನ ಭಾಗವು ನೇರವಾಗಿರಬೇಕು.
ಅಲುಗಾಡದೆ ಐದು ನಿಮಿಷಗಳ ಕಾಲ ನೀವು ಇದೇ ಭಂಗಿಯಲ್ಲಿ ಇರಿ. ಆರಂಭದಲ್ಲಿ ನಿಮಗೆ 5 ನಿಮಿಷಗಳು ಸಾಧ್ಯವಾಗದಿದ್ದರೆ ಮೊದಲು ಒಂದು ನಿಮಿಷ ಮಾಡಿ. ನಂತರ 2 ನಿಮಿಷ, 3 ನಿಮಿಷ.. ಹೀಗೆ ಹೆಚ್ಚಿಕೊಂಡು ಹೋಗಿ. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.
ಬೆನ್ನುಮೂಳೆ ಕೂಡಾ ಆರೋಗ್ಯಕರವಾಗಿರುತ್ತದೆ. ಬೆನ್ನು ನೋವಿನಿಂದ ಬಳಲುವವರು ಈ ವ್ಯಾಯಾಮ ಮಾಡಿದರೆ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗುತ್ತದೆ. ವಾಲ್ ಸಿಟ್ ವ್ಯಾಯಾಮ ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತದೆ. ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು. ಈ ವ್ಯಾಯಾಮದಿಂದ ಹೃದಯ ಸಂಬಂಧಿ ವ್ಯವಸ್ಥೆ ಕೂಡಾ ಆರೋಗ್ಯಕರವಾಗಿರುತ್ತದೆ. ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆ ಆಗುತ್ತದೆ. ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವವರು ಈ ವ್ಯಾಯಾಮ ಮಾಡಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ.