ಇನ್ನು ಮುಂದೆ ನಿಮ್ಮ ಮೈ ಕೈ ನೋವು ಜೊತೆಗೆ ನಿಮ್ಮ ಹೊಟ್ಟೆಯ ಗಾತ್ರ ಹೆಚ್ಚಾಗಲು ಕಾರಣವಾಗಿರುವ ಬೊಜ್ಜು ಕರಗಿಸಲು ಈ ಯೋಗಾಸನಗಳು ನೆರವಾಗುತ್ತವೆ.
ಯೋಗಭ್ಯಾಸದಿಂದ ಒಬ್ಬ ವ್ಯಕ್ತಿ ಆರೋಗ್ಯಕರವಾದ ಜೀವನಶೈಲಿ ಹೊಂದಬಹುದು. ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವ ಜೊತೆಗೆ ಸಣ್ಣಪುಟ್ಟ ಯೋಗ ಅಭ್ಯಾಸಗಳನ್ನು ಮಾಡಿಕೊಂಡು ಆರೋಗ್ಯಕರವಾಗಿ ಜೀವನ ನಡೆಸಬಹುದು
ಪ್ರತಿದಿನ ಯೋಗ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲದೆ ಮನಸ್ಸಿಗೆ ಉತ್ತಮ ಚೈತನ್ಯ ಸಿಗುತ್ತದೆ. ಮಾನಸಿಕ ಒತ್ತಡ ಸರಿಯಾಗಿ ನಿರ್ವಹಣೆಯಾಗಲು ಅನುಕೂಲವಾಗುತ್ತದೆ. ಯೋಗಭ್ಯಾಸದಿಂದ ಇಷ್ಟು ಮಾತ್ರವಲ್ಲದೆ ದೇಹದ ತೂಕವನ್ನು ಸಹ ಕರಗಿಸುವ ಪ್ರಯೋಜನವಿದೆ. ಸೊಂಟದ ಭಾಗದ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ನೌಕಾಸನ
ನೌಕೆ ಎಂದರೆ ಹಡಗು ಅಥವಾ ದೋಣಿ. ಇದು ಅದೇ ತರಹದ ಯೋಗಾಸನ. ಅಂದರೆ ದೇಹವನ್ನು ದೋಣಿಯ ತರಹ ಇಟ್ಟುಕೊಂಡು ಯೋಗ ಅಭ್ಯಾಸ ಮಾಡುವುದು ಎಂದರ್ಥ. ಈ ಯೋಗಾಸನ ಮಾಡುವುದರಿಂದ ಸುಲಭವಾಗಿ ನಿಮ್ಮ ಸೊಂಟದ ಕೊಬ್ಬು ನಿಯಂತ್ರಣಕ್ಕೆ ಬರುತ್ತದೆ.
ಕೇವಲ ಸೊಂಟದ ಕೊಬ್ಬು ಮಾತ್ರವಲ್ಲ, ನಿಮ್ಮ ಕುತ್ತಿಗೆ ಹಾಗೂ ತೊಡೆಯ ಭಾಗದ ಕೊಬ್ಬಿನ ಅಂಶ ಕೂಡ ಇದರಿಂದ ನಿಯಂತ್ರಣಕ್ಕೆ ಬರುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ದೇಹದಲ್ಲಿ ಸುಲಭವಾಗಿ ರಕ್ತ ಸಂಚಾರ ಉಂಟಾಗುತ್ತದೆ.
ಕುಂಭಕಾಸನ
ನಿಮ್ಮ ಸೊಂಟದ ಭಾಗದ ಕೊಬ್ಬನ್ನು ಕರಗಿಸಲು ಮತ್ತು ನಿಮ್ಮ ದೇಹದ ತೂಕವನ್ನು ಕರಗಿಸಲು ಮಾಡಬಹುದಾದ ಇನ್ನೊಂದು ಸುಲಭವಾದ ಯೋಗಾಸನ ಎಂದರೆ ಅದು ಕುಂಭಕಾಸನ.
ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ಬೆನ್ನು ನೋವು ಸಹ ಕಡಿಮೆಯಾಗುತ್ತದೆ. ದೇಹದ ಮಾಂಸ ಖಂಡಗಳನ್ನು ಬಲಪಡಿಸುವ ಜೊತೆಗೆ ನಿಮ್ಮ ದೇಹದ ಫ್ಲೆಕ್ಸಿಬಿಲಿಟಿ ಉತ್ತಮಗೊಂಡು ದೇಹದಲ್ಲಿ ಅತ್ಯುತ್ತಮ ರಕ್ತ ಸಂಚಾರ ಏರ್ಪಡಾಗುತ್ತದೆ.
ಉಸ್ತ್ರಾಸನ
ಇದು ಒಂಟೆಯ ಭಂಗಿಯಲ್ಲಿ ಮಾಡಬಹುದಾದ ಯೋಗಾಸನವಾಗಿದ್ದು, ಪ್ರಪ್ರಥಮ ಬಾರಿಗೆ ಒಂದು ವೇಳೆ ನೀವು ಮಾಡುತ್ತಿದ್ದರೆ, ಒಬ್ಬ ಯೋಗ ತಜ್ಞರ ಆಣತಿಯಂತೆ ಮಾಡಿ.
ಯಾರಿಗೆ ಬೆನ್ನು ನೋವು ಮತ್ತು ಸೊಂಟ ನೋವು ಇರುತ್ತದೆ ಅಂತಹವರು ಇದನ್ನು ಮಾಡಬಹುದು. ಬಹಳ ದಿನಗಳಿಂದ ಶೇಖರಣೆಯಾಗಿರುವ ನಿಮ್ಮ ಸೊಂಟದ ಕೊಬ್ಬನ್ನು ಸುಲಭವಾಗಿ ಕರಗಿಸುವ ಯೋಗಾಸನ ಇದಾಗಿದೆ.
ಧನುರಾಸನ
ಇದನ್ನು ಬಿಲ್ಲು ಯೋಗಾಸನ ಎಂದು ಕೂಡ ಕರೆಯುತ್ತಾರೆ. ಸುಲಭವಾಗಿ ಸೊಂಟದ ಬೊಜ್ಜನ್ನು ತುಂಬಾ ವೇಗವಾಗಿ ಇದು ಕರಗಿಸುತ್ತದೆ. ಹೊಟ್ಟೆಯ ಭಾಗದ ಮಾಂಸಖಂಡಗಳನ್ನು ಬಲಪಡಿಸುವ ಜೊತೆಗೆ ಬೆನ್ನುಹುರಿಯನ್ನು ಸದೃಢಪಡಿಸುತ್ತದೆ. ನಿಮ್ಮ ಮಾನಸಿಕ ಒತ್ತಡ ಮತ್ತು ಆತಂಕವನ್ನು ಸಹ ಈ ಯೋಗಭ್ಯಾಸದಿಂದ ದೂರ ಮಾಡಿಕೊಳ್ಳಬಹುದು.
ಭುಜಂಗಾಸನ
ಇದನ್ನು ಹಾವಿನ ಅಥವಾ ಸರ್ಪಾಸನ ಎಂದು ಸಹ ಕರೆಯುತ್ತಾರೆ. ಇದರಿಂದ ಹೊಟ್ಟೆಯ ಭಾಗದ ಹೆಚ್ಚುವರಿ ಕೊಬ್ಬನ್ನು ಕರಗಿಸಬಹುದಾದ ಸಾಧ್ಯತೆ ಇದೆ.
ಬಹಳ ಸುಲಭವಾಗಿ ಈ ಯೋಗಭ್ಯಾಸವನ್ನು ಮಾಡಬಹುದು. ಇದರಿಂದ ನಿಮ್ಮ ಬೆನ್ನಿನ ಭಾಗದ ಮಾಂಸ ಖಂಡಗಳಿಗೆ ಬಲ ಬರುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಅಭಿವೃದ್ಧಿಯಾಗುತ್ತದೆ ಮತ್ತು ನಿಮಗೆ ಹೆಚ್ಚು ಫ್ಲೆಕ್ಸಿಬಿಲಿಟಿ ಸಿಗುತ್ತದೆ.