ಮನೆ ಸುದ್ದಿ ಜಾಲ ‘ಅಧಿಕಾರ ಬೇಕಾದವರು ಡಿ.ಕೆ. ಶಿವಕುಮಾರ್ ಜೊತೆ ಹೋಗಿ, ಪಕ್ಷ ಕಟ್ಟುವವರು ನನ್ನ ಜೊತೆ ಬನ್ನಿ’: ಬಿ.ಕೆ....

‘ಅಧಿಕಾರ ಬೇಕಾದವರು ಡಿ.ಕೆ. ಶಿವಕುಮಾರ್ ಜೊತೆ ಹೋಗಿ, ಪಕ್ಷ ಕಟ್ಟುವವರು ನನ್ನ ಜೊತೆ ಬನ್ನಿ’: ಬಿ.ಕೆ. ಹರಿಪ್ರಸಾದ್

0

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಪಕ್ಷದೊಳಗಿನ ಸಚಿವ ಸ್ಥಾನ ಆಕಾಂಕ್ಷಿಗಳು ಹಾಗೂ ಅಧಿಕಾರದ ನಿರೀಕ್ಷೆಯಲ್ಲಿರುವ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

“ಯಾರಿಗೆ ಅಧಿಕಾರ ಮತ್ತು ಸ್ಥಾನಮಾನ ಬೇಕೋ ಅವರು ಡಿ.ಕೆ. ಶಿವಕುಮಾರ್ ಅವರ ಜೊತೆ ಹೋಗಲಿ. ಪಕ್ಷವನ್ನು ಬಲಪಡಿಸಿ ಸಂಘಟನೆ ಕಟ್ಟಬೇಕು ಎನ್ನುವವರು ನನ್ನ ಜೊತೆ ಬನ್ನಿ” ಎಂದು ಹೇಳುವ ಮೂಲಕ ಅವರು ಪಕ್ಷದ ನಾಯಕರಿಗೆ ಖಡಕ್ ಸಂದೇಶ ನೀಡಿದ್ದಾರೆ.

ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವವರು ಈಗ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರೂ ಸೇರಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ಸಂಘಟನೆ ಮತ್ತು ಸರ್ಕಾರದ ಜವಾಬ್ದಾರಿಗಳನ್ನು ಸಮತೋಲನವಾಗಿ ನಿರ್ವಹಿಸಿಕೊಂಡು ಮುಂದೆ ಸಾಗಬೇಕು. ನನ್ನ ಪೂರ್ವಜರು ಮಾಡಿದ ಪುಣ್ಯದ ಫಲವಾಗಿ ಹಾಗೂ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಪರಿಣಾಮ ಈ ಪವಿತ್ರ ಪಕ್ಷದ ಅಧ್ಯಕ್ಷ ಸ್ಥಾನ ನನಗೆ ದೊರೆತಿದೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.

ಸಾಮಾನ್ಯ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಎದುರಾದರೂ ನಾನು ಸದಾ ಅವರ ಜೊತೆಗೆ ನಿಲ್ಲುತ್ತೇನೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಅವರು, 2023ರ ಬಳಿಕ ಕರ್ನಾಟಕದಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು. “ನಾನು ಸರ್ಕಾರದ ವ್ಯಕ್ತಿಯಲ್ಲ, ಕಾಂಗ್ರೆಸ್ ಪಕ್ಷದ ವ್ಯಕ್ತಿ. ಕಳೆದ 53 ವರ್ಷಗಳಿಂದ ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದು, ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷದ ವರಿಷ್ಠರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಇನ್ನಷ್ಟು ಸಮರ್ಪಕವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.