ಮನೆ ಕಾನೂನು ಹೈಕೋರ್ಟ್‌ ನ ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಹೈಕೋರ್ಟ್‌ ನ ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ಪ್ರಕರಣ ದಾಖಲಿಸಿಕೊಂಡ ಪೊಲೀಸರು

0

ಕರ್ನಾಟಕ ಹೈಕೋರ್ಟ್‌ ನ ಇಬ್ಬರು ನ್ಯಾಯಮೂರ್ತಿಗಳಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಿದ ಅಪರಿಚಿತರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

“ನೀವು ಬಳಸುತ್ತಿರುವ ಸಿಮ್‌ ಕಾರ್ಡ್‌ ಗಳಿಂದ ಕಾನೂನುಬಾಹಿರ ಜಾಹೀರಾತು ಹಾಗೂ ಆಕ್ಷೇಪಾರ್ಹ ಸಂದೇಶಗಳನ್ನು ಹಾಕುತ್ತಿದ್ದೀರಿ” ಎಂದು ನ್ಯಾಯಮೂರ್ತಿಗಳಿಗೆ ಬ್ಲಾಕ್‌ ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಭದ್ರತಾ ಪೊಲೀಸ್‌ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಹೈಕೋರ್ಟ್ ಭದ್ರತಾ ಇನ್‌ ಸ್ಪೆಕ್ಟರ್‌ ಜಿ ಶೋಭಾ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಎ ಆರ್ ರಘುನಾಯ್ಕ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನ್ಯಾ ಎಸ್‌ ಜಿ ಪಂಡಿತ್ ಅವರಿಗೆ ಅಪರಿಚಿತನೊಬ್ಬ ಮಾ.15ರಂದು ಸಂಜೆ 4 ಗಂಟೆಗೆ ಕರೆ ಮಾಡಿದ್ದ. ತಾನು ಡಿಒಪಿಟಿ (ಆಡಳಿತ ಸುಧಾರಣೆ ಮತ್ತು ತರಬೇತಿ) ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಆತ ಸಿಮ್‌ ಕಾರ್ಡ್‌ನಿಂದ ಕಾನೂನುಬಾಹಿರವಾಗಿ ಜಾಹಿರಾತು ಹಾಗೂ ಆಪೇಕ್ಷಾರ್ಹ ಸಂದೇಶ ಪ್ರಕಟಿಸುತ್ತಿದ್ದೀರಿ. ಹೀಗಾಗಿ ನಿಮ್ಮ ಮೇಲೆ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ಬೇಕಾದರೆ ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ ಎಂದಿದ್ದ. ಬಳಿಕ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಆ ವ್ಯಕ್ತಿ, ಏರು ಧ್ವನಿಯಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿದ್ದ. ಕರೆ ಸ್ಥಗಿತಗೊಳಿಸಿದ್ದ ನ್ಯಾಯಮೂರ್ತಿಗಳು ದೂರು ದಾಖಲಿಸುವಂತೆ ಭದ್ರತಾ ಪೊಲೀಸರಿಗೆ ನಿರ್ದೇಶಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಅದೇ ದಿನ ಬೆಳಿಗ್ಗೆ 9 ಗಂಟೆಗೆ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಹೇರೂರು ಅವರಿಗೆ ಕರೆ ಮಾಡಿ ಅದೇ ಬಗೆಯ ಬೆದರಿಕೆ ಹಾಕಿದ್ದ. ನಿಮ್ಮ ಮೇಲೆ ಮುಂಬೈನ ಅಂದೇರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಕಾದರೆ ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ. ಅವರ ಜತೆ ಮಾತನಾಡಿ ನಿಮ್ಮ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿ ಕರೆಯನ್ನು ಇನ್ನೊಬ್ಬನಿಗೆ ವರ್ಗಾವಣೆ ಮಾಡಿದ್ದ. ಏರುಧ್ವನಿಯಲ್ಲಿ ಮಾತನಾಡಿದ್ದ ಆ ಆಗಂತುಕ ದುಡ್ಡು ಕೊಟ್ಟರೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದ.