ಬೆಂಗಳೂರು: ನಗರದ ಟೆಕಿಯೊಬ್ಬರನ್ನು 1 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಕೋಟ್ಯಂತರ ರೂ. ವಂಚಿಸಿದ್ದ ಮೂವರು ಸೈಬರ್ ವಂಚಕರನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಕರಣ್, ತರುಣ್ ನಟಾನಿ ಮತ್ತು ದೆಹಲಿಯ ಧವಲ್ ಪಾ ಬಂಧಿತರು. ವಂಚಕರು, ಜಕ್ಕೂರು ನಿವಾಸಿ ಟೆಕಿ ವಿಜಯ್ ಕುಮಾರ್ ಅವರನ್ನು ನ.11ರಿಂದ ಡಿ.12ರವರೆಗೆ ಡಿಜಿಟೆಲ್ ಆರೆಸ್ಟ್ ಮಾಡಿ ಬೆದರಿಸಿ 11.83 ಕೋಟಿ ರೂ. ಪಡೆದು ವಂಚಿಸಿದ್ದರು. ಪ್ರಕರಣದ ಹಿನ್ನೆಲೆ: ನ.11ರಂದು ವಿಜಯ್ ಕುಮಾರ್ ಮೊಬೈಲ್ಗೆ ಕರೆ ಮಾಡಿರುವ ಆರೋಪಿಗಳ ಪೈಕಿ ಒಬ್ಬ ನಾನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಮೊಬೈಲ್ ಸಂಖ್ಯೆಯಿಂದ ತುಂಬಾ ಮೆಸೇಜ್ಗಳು ಹಾಗೂ ಜಾಹೀರಾತುಗಳು ಡೆಲಿವರಿಯಾಗಿವೆ. ಈ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ನಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡುವುದಾಗಿ ಹೇಳಿದ್ದ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಬಗ್ಗೆ ಮುಂಬೈ ಕೊಲಾಬಾ ಕ್ರೈಂ ಬ್ರಾಂಚ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಆಧಾರ್ ಕಾರ್ಡ್ ಸಂಖ್ಯೆ ಬಳಸಿಕೊಂಡು ನರೇಶ್ ಗೋಯೆಲ್ ಎಂಬಾತ ಬ್ಯಾಂಕ್ ಖಾತೆ ತೆರೆದು 6 ಕೋಟಿ ರೂ. ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡಿದ್ದಾನೆ. ಹೀಗಾಗಿ ನಿಮ್ಮನ್ನು ಡಿಜಿಟೆಲ್ ಅರೆಸ್ಟ್ ಮಾಡಿದ್ದೇವೆ ಎಂದಿದ್ದಾನೆ. ಬಳಿಕ ಆರೋಪಿಗಳು ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಸಿ ನ.25ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಇದೆ. ಇದರಿಂದ ನಿಮ್ಮ ಕುಟುಂಬಕ್ಕೆ ಅಪಾಯವಿದೆ ಎಂದು ಹೆದರಿಸಿ, ನ.11ರಿಂದ ಡಿ.12ರವರೆಗೆ ಯಲಹಂಕದ ಲಾಡ್ಜ್ವೊಂದರಲ್ಲಿ ಬಾಡಿಗೆಗೆ ಪಡೆದು ಉಳಿದುಕೊಳ್ಳುವಂತೆ ಮಾಡಿದ್ದರು.
ಷೇರು ಮಾರಾಟ ಮಾಡಿಸಿ ಹಣ ಪಡೆದಿದ್ದರು: ನಿಮ್ಮ ಪ್ರಕರಣವನ್ನು ಇತ್ಯರ್ಥ ಪಡಿಸಲು ನಿಮ್ಮ ಬಳಿಯಿರುವ ಷೇರು ಮಾರಿ ಹಣ ಕೊಡುವಂತೆ ಸೂಚಿಸಿದ್ದು, ಅದರಂತೆ ವಿಜಯ್ ಕುಮಾರ್ ತನ್ನ 50 ಲಕ್ಷ ರೂ. ಮೌಲ್ಯದ ಷೇರು ಮಾರಾಟ ಮಾಡಿ 11.83 ಕೋಟಿ ರೂ. ಪಡೆದಿದ್ದರು. ಹೀಗೆ ಒಂದು ತಿಂಗಳ ಬಳಿಕ ವಿಜಯ್ ಕುಮಾರ್ಗೆ ಡಿಜಿಟಲ್ ಅರೆಸ್ಟ್ ಮಾಡಿ ವಂಚಸಿದ್ದರು.
ಬ್ಯಾಂಕ್ ಖಾತೆ ನೀಡಿದ ಸುಳಿವು: ಪ್ರಕರಣದ ತನಿಖೆಗೆ ಇಳಿದಿದ್ದ ಪೊಲೀಸರು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ಮಾಹಿತಿ ಕಲೆ ಹಾಕಿದಾಗ ಬ್ಯಾಂಕ್ವೊಂದರ ಖಾತೆಗೆ 7.5 ಕೋಟಿ ರೂ. ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಇದರ ಜಾಡು ಹಿಡಿದು ಪೊಲೀಸರು ಬ್ಯಾಂಕ್ಗೆ ತೆರಳಿ ಪರಿಶೀಲಿಸಿದಾಗ ಆ ಹಣ ಸೂರತ್ನ ಚಿನ್ನದ ವ್ಯಾಪಾರಿ ಖಾತೆಗೆ ಹೋಗಿರುವುದು ಗೊತ್ತಾಗಿದೆ. ಬಳಿಕ ಆ ಚಿನ್ನದ ವ್ಯಾಪಾರಿಯನ್ನು ವಿಚಾರಣೆ ಮಾಡಿದಾಗ ಆರೋಪಿ ಧವಲ್ ಷಾ ನನ್ನ ಖಾತೆಗೆ ಹಣ ವರ್ಗಾಯಿಸಿ, ಅಷ್ಟಕ್ಕೂ ಚಿನ್ನಾಭರಣ ಖರೀದಿಸಿರುವ ವಿಚಾರ ಎಂದು ತಿಳಿಸಿದ್ದಾನೆ. ಬಳಿಕ ಧವಲ್ ಷಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನೀಡಿದ ಮಾಹಿತಿ ಮೇರೆಗೆ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
1.50 ಕೋಟಿ ರೂ. ಕಮಿಷನ್: ದೆಹಲಿ ಮೂಲದ ಧವಲ್ ಷಾ ಚಿನ್ನಾಭರಣ ವ್ಯಾಪಾರದ ಬ್ರೋಕರ್ ಆಗಿದ್ದು, ಈತನಿಗೆ ದುಬೈನಲ್ಲಿರುವ ಸೈಬರ್ ವಂಚನೆ ಜಾಲದ ಕಿಂಗ್ಪಿನ್ಗಳು ಕರೆ ಮಾಡಿ, ನಿನ್ನ ಬ್ಯಾಂಕ್ ಖಾತೆಗೆ 7.50 ಕೋಟಿ ರೂ. ವರ್ಗಾಯಿಸುತ್ತೇನೆ. ಅಷ್ಟಕ್ಕೂ ಚಿನ್ನಾಭರಣ ಖರೀದಿಸಿ ಕೊಟ್ಟರೆ ನಿನಗೆ 1.50 ಕೋಟಿ ರೂ. ಕಮಿಷನ್ ನೀಡುವುದಾಗಿ ಅಮಿಷವೊಡ್ಡಿದ್ದಾನೆ. ಅದರಂತೆ ಧವಲ್ ಷಾ ಕೃತ್ಯ ಎಸಗಿದ್ದಾನೆ. ಅದರಂತೆ ಕಮಿಷನ್ ಕೂಡ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.














